ತಿರುವನಂತಪುರಂ: ವಿಮಾನದ ರನ್ ವೇನಲ್ಲಿ ದೇವರ ಮೆರವಣಿಗೆ ಸಾಗುವ ಹಿನ್ನೆಲೆಯಲ್ಲಿ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 5 ಗಂಟೆಗಳ ಕಾಲ ಸ್ಥಗಿತಗೊಳ್ಳಲಿದೆ.
ವಿಮಾನ ರನ್ ವೇನಲ್ಲಿ ಶ್ರೀ ಪದ್ಮನಾಭಸ್ವಾಮಿ ದೇವರ ಮೆರವಣಿಗೆ ‘ಅರಟ್ಟು’ ಸಾಗುವ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದ 5 ಗಂಟೆಗಳ ಕಾಲ ವಿಮಾನ ನಿಲ್ದಾಣದ ಕಾರ್ಯ ಸ್ಥಗಿತಗೊಳ್ಳಲಿದೆ ಎಂದು ತಿರುವನಂತಪುರಂ ಅತರಾಷ್ಟ್ರೀಯ ವಿಮಾನ ನಿಲ್ದಾಣ ಮಾಹಿತಿ ನೀಡಿದೆ.
ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಿಂದ ಅಲ್ಪಾಸ್ಸಿ ಅರಟ್ಟು ಮೆರವಣಿಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮೆರವಣಿಗೆಗೆ ಅನುಕೂಲವಾಗುವಂತೆ ಇಂದು ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ವಿಮಾನ ನಿಲ್ದಾಣ ಕಾರ್ಯ ನಿರ್ವಹಿಸುವುದಿಲ್ಲ. ವಿಮಾನ ಸೇವೆಯೂ ಈ ಅವಧಿಯಲ್ಲಿ ಲಭ್ಯವಿರುವುದಿಲ್ಲ. ನಾಲ್ಕು ವಿಮಾನಗಳ ಸೇವೆಯನ್ನು ಮರು ಹೊಂದಿಸಲಾಗಿದೆ ಎಂದು ತಿಳಿಸಿದೆ.
ಪ್ರತಿ ಎರಡು ವರ್ಷಕ್ಕೊಮ್ಮೆ ಈ ಮೆರವಣಿಗೆ ನಡೆಯುತ್ತದೆ. ದಶಕಗಳ ಕಾಲದಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ದೇವರ ಮೆರವಣಿಗೆ ದೇವಸ್ಥಾನಕ್ಕೆ ಹಿಂದಿರುಗಿದ ನಂತರ ರನ್ ವೇ ಸ್ವಚ್ಛಗೊಳಿಸಲಾಗುತ್ತದೆ. ಬಳಿಕ ಪರಿಶೀಲನೆ ನಡೆಸಿ ವಿಮಾನ ಸೇವೆ ಪುನರಾರಂಭಗೊಳಿಸಲಾಗುವುದು ಎಂದು ವಿಮಾನ ನಿಲ್ದಾಣ ತಿಳಿಸಿದೆ.
ದೇವರ ವಿಗ್ರಹಗಳ ಪವಿತ್ರ ಸ್ಥಾನಕ್ಕಾಗಿ ಶಂಗುಮುಖಂ ಕಡಲತೀರವನ್ನು ತಲುಪಲು ಮೆರವಣಿಗೆಯು ವಿಮಾನ ನಿಲ್ದಾಣವಿರುವ ಈ ಮಾರ್ಗದಲ್ಲಿ ಹಾದು ಹೋಗುತ್ತದೆ. ಈ ಪದ್ಧತಿ ಶತಮಾನಗಳ ಹಿಂದಿನಿಂದ ನಡೆದು ಬಂದಿದೆ ಎಂದು ತಿಳಿದುಬಂದಿದೆ.