ಗಾಜಿಯಾಬಾದ್‌ನ ಎಬಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಜೈ ಶ್ರೀ ರಾಮ್’ ಘೋಷಣೆಯ ಕುರಿತು ಇಬ್ಬರು ಪ್ರಾಧ್ಯಾಪಕರು ವಿದ್ಯಾರ್ಥಿಗೆ ಛೀಮಾರಿ ಹಾಕಿದ್ದರು. ಈ ವೀಡಿಯೊ ವೈರಲ್ ಆದ ನಂತರ ಸಂಸ್ಥೆಯ ನಿರ್ದೇಶಕ ಸಂಜಯ್ ಕುಮಾರ್ ಸಿಂಗ್ ಅಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕೃತವಾಗಿ ಖಚಿತಪಡಿಸಿದ್ದಾರೆ.
“ನಿನ್ನೆ ಒಂದು ವೀಡಿಯೊ ನನ್ನ ಅರಿವಿಗೆ ಬಂದಿತು. ವೀಡಿಯೊದ ಆಧಾರದ ಮೇಲೆ ನಾವು ತನಿಖಾ ಸಮಿತಿಯನ್ನು ರಚಿಸಿದ್ದೇವೆ ಮತ್ತು 24 ಗಂಟೆಗಳ ಒಳಗೆ ತಮ್ಮ ಶಿಫಾರಸುಗಳನ್ನು ಸಲ್ಲಿಸಲು ಅವರಿಗೆ ಸೂಚಿಸಿದ್ದೇವೆ. ಅವರು ತಮ್ಮ ಶಿಫಾರಸುಗಳನ್ನು ಕಳುಹಿಸಿದ್ದಾರೆ . ಅವರ ನಡವಳಿಕೆಯು ಸೂಕ್ತವಲ್ಲ ಎಂದು ಕಂಡುಬಂದಿದ್ದು ಇಬ್ಬರು ಅಧ್ಯಾಪಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ” ಎಂದು ಸಂಜಯ್ ಕುಮಾರ್ ಸಿಂಗ್ ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ.
ಇಬ್ಬರು ಪ್ರಾಧ್ಯಾಪಕರಾದ ಮಮತಾ ಗೌತಮ್ ಮತ್ತು ಡಾ ಶ್ವೇತಾ ಶರ್ಮಾ ಅವರು ವೇದಿಕೆ ಮೇಲೆ ಜೈ ಶ್ರೀರಾಮ್ ಪಠಿಸಿದ್ದ ವಿದ್ಯಾರ್ಥಿಯನ್ನು ಗದರಿ ಕಳಿಸಿದ್ದರು. ಪ್ರಾಧ್ಯಾಪಕರ ಈ ನಡವಳಿಕೆ ಬಗ್ಗೆ ವಿರೋಧ ವ್ಯಕ್ತವಾಗಿತ್ತು.
ಘಟನೆ ಬಗ್ಗೆ ವಿವರಿಸಿದ ಪ್ರೊಫೆಸರ್ ಮಮತಾ, ಜೈ ಶ್ರೀ ರಾಮ್ ಘೋಷಣೆ ಕೂಗುವುದರಲ್ಲಿ ತನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ವಿದ್ಯಾರ್ಥಿಯು ತನ್ನ ಸಹೋದ್ಯೋಗಿಯೊಂದಿಗೆ ವಾದಿಸುತ್ತಿದ್ದನು. ನನ್ನ ವಿರುದ್ಧ ಮಾಡಲಾಗುತ್ತಿರುವ ಕಾಮೆಂಟ್‌ಗಳು ನನ್ನನ್ನು ಕಳವಳಗೊಳಿಸಿದೆ. ನಾನು ಸನಾತನಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವಳು ಮತ್ತು ನವರಾತ್ರಿಯಲ್ಲಿ ನಾವು ಇಡೀ ಒಂಬತ್ತು ದಿನಗಳ ಕಾಲ ವಿಭಿನ್ನ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತೇವೆ. ಜೈ ಶ್ರೀ ರಾಮ್ ಘೋಷಣೆಯಿಂದ ನಮಗೆ ಎಂದಿಗೂ ಸಮಸ್ಯೆ ಇರಲಿಲ್ಲ. ನನ್ನ ವಿರುದ್ಧ ಯಾರಾದರೂ ಹೆಚ್ಚಿನ ಕಾಮೆಂಟ್‌ಗಳನ್ನು ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಪ್ರತ್ಯೇಕ ವಿಡಿಯೋದಲ್ಲಿ ಹೇಳಿದ್ದಾರೆ
ಇಂಟರ್ನೆಟ್ ನಲ್ಲಿ ಕಂಡುಬಂದ ಮತ್ತೊಂದು ವಿಡಿಯೋದಲ್ಲಿ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ “ನಾವು ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಇಲ್ಲಿದ್ದೇವೆ. ಇಲ್ಲಿ ಜೈ ಶ್ರೀರಾಮ್ ಘೋಷಣೆಗಳು ಏಕೆ? ಎಂದು ಪ್ರಶ್ನಿಸುತ್ತಾ ಘೋಷಣೆ ಕೂಗಿದ್ದನ್ನ ವಿರೋಧಿಸಿದ್ದಾರೆ.
ಇದಲ್ಲದೆ ಕೆಲವು ವ್ಯಕ್ತಿಗಳು ಕಾಲೇಜು ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿದ್ದಾರೆ ಮತ್ತು ಅದರ ಮುಖಪುಟದಲ್ಲಿ ‘ಜೈ ಶ್ರೀ ರಾಮ್’ ಪೋಸ್ಟರ್ ಅನ್ನು ಹಾಕಿದ್ದಾರೆ. ಅದಾಗ್ಯೂ ವೆಬ್ ಸೈಟ್ ಅನ್ನು ಮೂಲ ಸ್ಥಿತಿಗೆ ಮರುಸ್ಥಾಪಿಸಲಾಗಿದೆ ಎಂದು ವರದಿಗಳು ತಿಳಿಸಿವೆ.