ಅನೇಕರಿಗೆ ಬೆಳಗ್ಗೆ ಎದ್ದೊಡನೆಯೇ ನಿಂಬು ಮಿಶ್ರಿತ ನೀರನ್ನು ಕುಡಿಯುವ ಅಭ್ಯಾಸ ಇರುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ನಿಂಬು ಸೇವನೆಯು ನಿಮ್ಮ ದೇಹಕ್ಕೆ ವಿಷಕಾರಿಯಾಗಿ ಮಾರ್ಪಾಡಾಗಬಹುದು. ನಿಂಬುವಿನಲ್ಲಿರುವ ಅತಿಯಾದ ಆಮ್ಲೀಯ ಗುಣದಿಂದಾಗಿ ನಿಮ್ಮ ಹಲ್ಲುಗಳ ಆರೋಗ್ಯ ಹಾಳಾಗಬಹುದು. ಇದರಿಂದ ನಿಮಗೆ ದಂತ ಸಮಸ್ಯೆಗಳು ಉಂಟಾಗಬಹುದು. ಅಲ್ಲದೇ ನಿಮ್ಮ ಜೀರ್ಣ ಕ್ರಿಯೆಯ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಬಲ್ಲದು.
ನಿಂಬು ರಸವನ್ನು ಮುಖಕ್ಕೆ ಹಚ್ಚಿಕೊಂಡರೆ ಅದು ಚರ್ಮ ಸಮಸ್ಯೆಗೆ ಕಾರಣವಾಗುತ್ತದೆ. ಈ ಚರ್ಮದ ಸಮಸ್ಯೆಯು ಸೂರ್ಯನಿಂದ ಬರುವ ವಿಕಿರಣದಿಂದ ತ್ವಚೆಗೆ ಉಂಟಾಗುವ ಡ್ಯಾಮೇಜ್ಗಿಂತಲೂ ಭಯಾನಕವಾದದ್ದು ಎನ್ನಲಾಗಿದೆ.
ಇನ್ನು ನಿಂಬುವಿನಲ್ಲಿರುವ ಸಿಟ್ರಿಕ್ ಅಂಶವು ಬಾಯಿ ಹುಣ್ಣಿಗೆ ಕಾರಣವಾಗಬಲ್ಲದು. ಕ್ಯಾಂಕರ್ ಸೋರಸ್ ಸಮಸ್ಯೆ ಉಳ್ಳವರು ನಿಂಬೆ ಹಣ್ಣು ಸೇರಿದಂತೆ ಸಿಟ್ರಿಕ್ ಜಾತಿಗೆ ಸೇರುವ ಯಾವುದೇ ಹಣ್ಣುಗಳನ್ನು ಸೇವಿಸದೇ ಇರುವುದೇ ಒಳ್ಳೆಯದು.
ಇನ್ನು ಅತಿಯಾದ ನಿಂಬು ಸೇವನೆಯಿಂದ ಮೈಗ್ರೇನ್ ಅಟ್ಯಾಕ್ಗಳು ಸಂಭವಿಸಬಹುದು. ಅಲ್ಲದೇ ಅತಿಯಾದ ನಿಂಬು ರಸದ ಸೇವನೆಯಿಂದ ಮೂತ್ರ ವಿಸರ್ಜನೆ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ನಿರ್ಜಲೀಕರಣ ಸಮಸ್ಯೆ ಕೂಡ ಉಂಟಾಗಬಹುದು.
ಹೀಗಾಗಿ ಯಾವಾಗಲೇ ನಿಂಬೆ ಹಣ್ಣು ಅಥವಾ ಸಿಟ್ರಿಕ್ ಅಂಶವುಳ್ಳ ಯಾವುದೇ ಹಣ್ಣುಗಳನ್ನ ಸೇವನೆ ಮಾಡಿದ ಬಳಿಕ ಹಲ್ಲುಜ್ಜುವುದು ಒಳ್ಳೆಯದು. ಅಥವಾ ಸ್ಟ್ರಾ ಬಳಕೆ ಮಾಡಿ ಸೇವಿಸುವುದು ಕೂಡ ಒಳ್ಳೆಯ ಆಯ್ಕೆಯೇ ಆಗಿದೆ.