ಬೆಂಗಳೂರು: ಕೃಷಿಗೆ ಸೌರ ವಿದ್ಯುತ್ ಪಂಪ್ ಸೆಟ್ ಅಳವಡಿಕೆ ಅಗತ್ಯವಿದ್ದು, ಇದರಿಂದ ಸರ್ಕಾರಕ್ಕೆ ವಾರ್ಷಿಕ ಒಂದು ಲಕ್ಷ ಕೋಟಿ ರೂ. ಉಳಿತಾಯವಾಗಲಿದೆ. ಈ ಹಿನ್ನಡೆಯಲ್ಲಿ ಸೌರ ವಿದ್ಯುತ್ ಪಂಪ್ ಸೆಟ್ ಅಳವಡಿಕೆ ಬಗ್ಗೆ ಅರಿವು ಮೂಡಿಸಬೇಕು ಎಂದು ಇಂಧನ ಸಚಿವ ಕೆ.ಜೆ. ಚಾರ್ಜ್ ತಿಳಿಸಿದ್ದಾರೆ.
ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಗುರುವಾರ ನಡೆದ ಇಂಧನ ಇಲಾಖೆ ಹಿರಿಯ ಅಧಿಕಾರಿಗಳು, ಸೋಲಾರ್ ನೀರಾವರಿ ಪಂಪ್ ಸೆಟ್ ತಯಾರಕರೊಂದಿಗಿನ ಸಭೆಯಲ್ಲಿ ಸಚಿವರು ಈ ಕುರಿತಾಗಿ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ದೀರ್ಘಾವಧಿ ಸ್ವಾವಲಂಬನೆ ಸಾಧಿಸಲು ಕೃಷಿಗೆ ಸೌರ ವಿದ್ಯುತ್ ಪಂಪ್ಸೆಟ್ ಅಳವಡಿಕೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ಮುಂಗಾರು ಮಳೆ ಕೊರತೆ ಕಾರಣ ದಿಢೀರ್ ಬೇಡಿಕೆ ಹೆಚ್ಚಾಗಿ ಈಗ ಕೊರತೆ ಉಂಟಾಗಿದೆ. ವಿದ್ಯುತ್ ಕ್ಷೇತ್ರದಲ್ಲಿ ದೀರ್ಘಾವಧಿ ಪರಿಹಾರಕ್ಕಾಗಿ ಸೌರ ವಿದ್ಯುತ್ ಪಂಪ್ ಸೆಟ್ ಗಳ ಅಳವಡಿಕೆ ಹೆಚ್ಚಾಗಬೇಕು. ಇದರಿಂದ ರೈತರು, ಸರ್ಕಾರದ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸುಮಾರು 34 ಲಕ್ಷ ಕೃಷಿ ಪಂಪ್ ಸೆಟ್ ಗಳಿದ್ದು ಇವುಗಳನ್ನು ಸೋಲಾರ್ ಪಂಪ್ಸೆಟ್ ಗಳಿಗೆ ಪರಿವರ್ತನೆ ಮಾಡಿದಲ್ಲಿ ರಾಜ್ಯ ಸರ್ಕಾರಕ್ಕೆ ವಾರ್ಷಿಕ ಒಂದು ಲಕ್ಷ ಕೋಟಿ ರೂ. ಉಳಿತಾಯವಾಗುತ್ತದೆ. ರಾಜ್ಯದಲ್ಲಿ ಪ್ರಸ್ತುತ 6801 ಕೃಷಿ ಸೋಲಾರ್ ಪಂಪ್ ಸೆಟ್ ಗಳಿವೆ. ಕೃಷಿ ಸೋಲಾರ್ ಪಂಪ್ ಸೆಟ್ ಅಳವಡಿಕೆ ವೆಚ್ಚದಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಶೇಕಡ 30ರಷ್ಟು ಅನುದಾನ ನೀಡಲಿದೆ ಎಂದು ಹೇಳಲಾಗಿದೆ.