ಪಾಟ್ನಾ: ಉತ್ಸರ್ಗ್ ಎಕ್ಸ್‌ಪ್ರೆಸ್ ಲೋಕೋ ಪೈಲಟ್ ರೈಲನ್ನು ನಿಲ್ಲಿಸಲು ಮರೆತಿದ್ದರಿಂದ ಪ್ಲಾಟ್‌ಫಾರ್ಮ್‌ನಲ್ಲಿ ಗೊಂದಲಕ್ಕೆ ಕಾರಣವಾದ ಘಟನೆ ಬಿಹಾರದ ಸರನ್ ಜಿಲ್ಲೆಯ ಮಾಂಝಿ ಹಾಲ್ಟ್‌ನಲ್ಲಿ ನಡೆದಿದೆ.
ಬುಧವಾರ ಸಂಜೆ ಈ ಘಟನೆ ನಡೆದಿದೆ. ಮಾಂಝಿ ಹಾಲ್ಟ್‌ನಿಂದ ಅರ್ಧ ಕಿಮೀ ದೂರದಲ್ಲಿರುವ ಸೇತುವೆಯ ಮೇಲೆ ಹೋಗುವಾಗ ತಾನು ರೈಲು ನಿಲ್ಲಿಸಲು ಮರೆತಿರುವುದು ಚಾಲಕನಿಗೆ ನೆನಪಾಗಿದೆ. ಕೂಡಲೇ ರೈಲನ್ನು ಸೇತುವೆಯ ಮೇಲೆ ನಿಲ್ಲಿಸಿದ್ದಾರೆ. ಇದರಿಂದ ಪ್ರಯಾಣಿಕರು ರೈಲಿನಿಂದ ಹತ್ತಲು ಅಥವಾ ಇಳಿಯಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಛಪ್ರಾ – ಫರೂಕಾಬಾದ್ ಉತ್ಸರ್ಗ್ ಎಕ್ಸ್‌ಪ್ರೆಸ್, ಛಾಪ್ರಾ ಜಂಕ್ಷನ್ ರೈಲು ನಿಲ್ದಾಣದಿಂದ ಸಂಜೆ 7 ಗಂಟೆಗೆ ಪ್ರಯಾಣ ಆರಂಭಿಸಿತ್ತು. 7.26ಕ್ಕೆ ಮಾಂಝಿ ಹಾಲ್ಟ್‌ನಲ್ಲಿ ನಿಲುಗಡೆಯನ್ನು ಹೊಂದಿತ್ತು. ಆದರೆ. ಲೋಕೋ ಪೈಲಟ್ ರೈಲು ನಿಲ್ದಾಣದಲ್ಲಿ ರೈಲು ನಿಲ್ಲಿಸಲು ಮರೆತಿದ್ದಾನೆ. ಇದರಿಂದ ಪ್ಲಾಟ್‌ಫಾರ್ಮ್‌ನಲ್ಲಿ ಕೆಲಕಾಲ ಗೊಂದಲ ಉಂಟಾಗಲು ಕಾರಣವಾಯ್ತು.
ಸೇತುವೆಯ ಮೇಲೆ ರೈಲನ್ನು ನಿಲ್ಲಿಸಿದ ನಂತರ, ಉತ್ಸರ್ಗ್ ಎಕ್ಸ್‌ಪ್ರೆಸ್‌ನ ಚಾಲಕ ಮತ್ತು ಗಾರ್ಡ್ ಮಾಂಝಿ ಹಾಲ್ಟ್‌ನ ಸ್ಟೇಷನ್ ಮಾಸ್ಟರ್ ಅನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಿದ್ರು. ಬಳಿಕ ಆ ಹಳಿಯಲ್ಲಿ ಬರುವ ರೈಲುಗಳನ್ನು ನಿಲ್ಲಿಸಲು ಸ್ಟೇಷನ್ ಮಾಸ್ಟರ್ ಇತರ ಸ್ಟೇಷನ್ ಮಾಸ್ಟರ್‌ಗಳಿಗೆ ಸಂವಹನ ನಡೆಸಿದ್ರು.
ಹಿಮ್ಮುಖವಾಗಿ ಚಲಿಸಿದ ಉತ್ಸರ್ಗ್ ಎಕ್ಸ್‌ಪ್ರೆಸ್:
ಉತ್ಸರ್ಗ್ ಎಕ್ಸ್‌ಪ್ರೆಸ್ ಮಾಂಝಿ ಸ್ಟೇಷನ್ ನಲ್ಲಿ ನಿಲ್ಲಲು ಹಿಮ್ಮುಖವಾಗಿ ಚಲಿಸಿತು. ನಂತರ ಪ್ರಯಾಣಿಕರು ನಿಲ್ದಾಣದಲ್ಲಿ ಇಳಿದ್ರೆ, ರೈಲಿಗಾಗಿ ಕಾಯುತ್ತಿದ್ದವರು ಹತ್ತಿದ್ರು. ಇದರಿಂದಾಗಿ ರೈಲು ಸುಮಾರು 20 ನಿಮಿಷ ತಡವಾಗಿ ಸಂಚರಿಸಿತು.