ಭಾರತೀಯ ನಾರೀಮಣಿಯರ ನೆಚ್ಚಿನ ಸಾಂಪ್ರದಾಯಿಕ ಉಡುಪು ಸೀರೆ. ಎಲ್ಲಾ ಕಾಲಕ್ಕೂ ಸಲ್ಲುವ ಸೀರೆಯನ್ನು ಭಾರತದವರೇ ಅಲ್ಲ, ವಿದೇಶಿಗರು ಮೆಚ್ಚಿಕೊಳ್ಳುತ್ತಾರೆ. ಆರು ಮೀಟರ್ ಇರುವ ಉದ್ದನೆಯ ಬಟ್ಟೆಯನ್ನು ಉಡುವುದು ಹೇಗೆ ಎಂಬ ಕೂತೂಹಲ ವಿದೇಶಿಗರದ್ದು. ಭಾರತಕ್ಕೆ ಭೇಟಿ ಕೊಟ್ಟ ವಿದೇಶಿ ಮಹಿಳೆ ಸೀರೆ ಉಟ್ಟು ಸಂಭ್ರಮಿಸುವುದು ಸಾಮಾನ್ಯ.
ಇನ್ನೂ ಸೀರೆ ಉಟ್ಟ ನಾರಿಗೆ ಸ್ವಲ್ಪ ಹೆಚ್ಚೇ ಗೌರವ. ಆಕೆ ಹಿಂದೆಂದಿಗಿಂತಲೂ ಚೆಂದ ಕಾಣುವುದು ಸೀರೆ ಉಟ್ಟಾಗಲೇ. ಸೀರೆ ರವಿಕೆ ಇವೆರಡರಿಂದಲೇ ಹತ್ತಾರು ಜನರ ಹೊಟ್ಟೆ ತುಂಬುತ್ತದೆ. ಎಷ್ಟೋ ಜನರ ಮುಖ್ಯ ಕಸುಬು ಸೀರೆ ರವಿಕೆಯ ಮೇಲೆ ಆಧಾರವಾಗಿರುತ್ತದೆ.
ಸೀರೆಗೆ ಫಾಲ್ ಹಾಗೂ ಜಿಗ್ ಜ್ಯಾಗ್ ಮಾಡುವುದು. ಕುಚ್ಚು ಹಾಕುವುದು, ಸಾದಾ ಸೀರೆಗಳ ಮೇಲೆ ಡಿಜೈನ್ ಮಾಡುವುದು, ರವಿಕೆ ಹೊಲಿಯುವುದು, ರವಿಕೆಗಳಿಗೆ ಕಸೂತಿ ಮಾಡಿಸುವುದು ಇವೆಲ್ಲಾ ಸೀರೆ ಉಡುವ ನಾರಿಯರಿಂದ ಬೇಡಿಕೆಯಲ್ಲಿರುವ ಕೆಲಸಗಳು.
ಈಗ ಇನ್ನೂ ಮುಂದುವರೆದು, ಸೀರೆಯನ್ನು ರೆಡಿ ಟು ವೇರ್ ಎಂಬಂತೆ ಸಿದ್ದಪಡಿಸಿ, ಮಡಚಿ ಕೊಡುವ ಸ್ಯಾರಿ ಡ್ರೇಪಿಂಗ್, ಬಗೆಬಗೆಯ ರೀತಿಯಲ್ಲಿ ಸೀರೆ ಉಡಿಸುವ ಸ್ಯಾರಿ ಸ್ಪೆಷಲಿಸ್ಟ್ ಗಳೂ ಬಹಳಷ್ಟು ಜನರಿದ್ದಾರೆ. ಇವರೆಲ್ಲರ ಕಸುಬಿಗೂ ಸೀರೆ, ರವಿಕೆಗಳೇ ಮೂಲ.
ಬಹುಶಃ ಪ್ರಪಂಚದ ಯಾವುದೇ ಬಟ್ಟೆ ಬರೆಗಳು ಸೀರೆಯಷ್ಟು, ಜನರ ಜೀವನಕ್ಕೆ ಆಧಾರ ಮತ್ತು ಆದಾಯಕ್ಕೆ ಮೂಲವಾಗಿ ಇರಲಾರದು.