
ರಾಂಚಿ: ಮದುವೆಯ ಸಂದರ್ಭದಲ್ಲಿ ವಧು-ವರರನ್ನು ವಾದ್ಯಗಳ ಮೂಲಕ, ಮೆರವಣಿಗೆಯಲ್ಲಿ ಕರೆತರುವುದು, ನವ ವಧು-ವರರಿಗೆ ಭರ್ಜರಿ ಸ್ವಾಗತ ಕೋರುವುದು ಸಾಮಾನ್ಯ. ಆದರೆ ಇಲ್ಲೊಂದು ಅಪರೂಪದ ಘಟನೆಯಲ್ಲಿ ಗಂಡನ ಕಿರುಕುಳಕ್ಕೆ ಬೇಸತ್ತ ಮಗಳನ್ನು ತಂದೆಯೊಬ್ಬರು ಮೆರವಣಿಗೆ ಮೂಲಕ ಅಷ್ಟೇ ಸಂತೋಷದಿಂದ ಮನೆಗೆ ಕರೆತಂದಿದ್ದಾರೆ.
ಜಾರ್ಖಂಡ್ ನ ಕಮರ್ಟೋಲಿಯ ಕೈಲಾಸ್ ನಗರದಲ್ಲಿ ಈ ಘಟನೆ ನಡೆದಿದೆ. ಪ್ರೇಮ್ ಗುಪ್ತಾ ತಮ್ಮ ಮಗಳು ಸಾಕ್ಷಿ ಗುಪ್ತಾಳನ್ನು ಭರ್ಜರಿಯಾಗಿ ತವರಿಗೆ ಸ್ವಾಗತಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಪ್ರೇಮ್ ಗುಪ್ತಾ ಹಾಗೂ ಕುಟುಂಬದವರು 2022ರ ಏಪ್ರಿಲ್ 28ರಂದು ತಮ್ಮ ಮಗಳು ಸಾಕ್ಷಿಯನ್ನು ಸಚಿನ್ ಕುಮಾರ್ ಎಂಬಾತನಿಗೆ ಅದ್ದೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು. ಸಚಿನ್ ರಾಂಚಿಯ ಸರ್ವೇಶ್ವರಿ ನಗರದ ನಿವಾಸಿಯಾಗಿದ್ದು, ಜಾರ್ಖಂಡ್ ನ ವಿದ್ಯುತ್ ವಿತರಣಾ ನಿಗಮದಲ್ಲಿ ಸಹಾಯಕ ಇಂಜಿನಿಯರ್ ಆಗಿದ್ದರು. ಮದುವೆಯಾದ ಕೆಲ ದಿನಗಳಲ್ಲೇ ಪತಿ ಹಾಗೂ ಮನೆಯವರ ಮುಖವಾಡ ಸಾಕ್ಷಿಗೆ ಅನಾವರಣವಾಗಿತ್ತು.
ಪತಿ ಸಚಿನ್ ಹಾಗೂ ಕುಟುಂಬದವರು ಸಾಕ್ಷಿಗೆ ಕಿರುಕುಳ ನೀಡಲು ಆರಂಭಿಸಿದ್ದರು. ಅಲ್ಲದೇ ಸಚಿನ್ ಸಾಕ್ಷಿಯನ್ನು ಮನೆಯಿಂದ ಹೊರ ಹಾಕಿದ್ದನಂತೆ. ಆದರೂ ಧೈರ್ಯಗೆಡದೇ ಗಂಡನ ಮನೆಯವರೊಂದಿಗೆ ಹೊಂದಿಕೊಂಡು ಬಾಳಲು ತೀರ್ಮಾನಿಸಿದ್ದ ಸಾಕ್ಷಿ ಅದೇ ಮನೆಯಲ್ಲಿ ವಾಸವಾಗಿದ್ದಳು. ಹೀಗೆ ಒಂದು ವರ್ಷ ಕಳೆದ ಬಳಿಕ ಸಾಕ್ಷಿಗೆ ತನ್ನ ಗಂಡ ಬೇರೊಂದು ಮದುವೆಯಾಗಿರುವ ವಿಚಾರ ಗೊತ್ತಾಗಿದೆ. ಆದರೂ ಸಹಿಸಿಕೊಂಡಿದ್ದ ಸಾಕ್ಷಿಗೆ ಪತಿ ಹಾಗೂ ಮನೆಯವರ ಕಿರುಕುಳ ಹೆಚ್ಚ ತೊಡಗಿತ್ತು.
ಮನೆಯವರ ಕಿರುಕುಳದಿಂದ ನೊಂದು ಪೋಷಕರಿಗೆ ವಿಷಯ ತಿಳಿಸಿದ್ದಳು. ಅಲ್ಲದೇ ಪತಿ ಮನೆಯನ್ನು ತೊರೆಯಲು ನಿರ್ಧರಿಸಿದ್ದಳು. ಮಗಳ ನಿರ್ಧಾರವನ್ನು ಸ್ವಾಗತಿಸಿದ ತಂದೆ-ತಾಯಿ ಆಕೆಯನ್ನು ಸಂತೋಷದಿಂದ ಸ್ವಾಗತಿಸಿದ್ದಾರೆ.
ಗಂಡನ ಮನೆಯಿಂದ ವಾಪಾಸ್ ಆದ ಸಾಕ್ಷಿಗೆ ತಂದೆ ಪ್ರೇಮ್ ಗುಪ್ತಾ, ಭರ್ಜರಿ ವಾದ್ಯ, ಪಟಾಕಿ ಮೆರವಣಿಗೆ ಸಂಭ್ರಮಾಚರಣೆ ಮೂಲಕ ಕರೆತಂದಿದ್ದಾರೆ. ಅಲ್ಲದೇ ತನ್ನ ಮಗಳು ಬಂಧನದಿಂದ ಬಿಡುಗಡೆಯಾಗಿದ್ದಾಳೆ. ಪತಿ ಹಾಗೂ ಅವರ ಮನೆಯವರ ಕಿರುಕುಳದಿಂದ ಮುಕ್ತಳಾಗಿದ್ದಾಳೆ. ಅದಕ್ಕಾಗಿ ಆಕೆಗೆ ಅದ್ದೂರಿ ಸ್ವಾಗತವನ್ನು ಕೋರಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಸಾಕ್ಷಿ ಪತಿಯಿಂದ ದೂರಾಗಲು ನಿರ್ಧರಿಸಿ ವಿಚ್ಛೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾಳೆ.
ಗಂಡನ ಹಾಗೂ ಗಂಡನ ಮನೆಯವರ ಕಿರುಕುಳ, ಹಿಂಸೆಗೆ ಬೇಸತ್ತು ನೊಂದಂತ ಮಹಿಳೆಯರು ಮತ್ತೆ ಮತ್ತೆ ಹೊಂದಿಕೊಳ್ಳಲು ಮುಂದಾಗುವ ಇಲ್ಲವೇ ಬೇರೆದಾರಿ ಕಾಣದೇ ಆತ್ಮಹತ್ಯೆಯಂತಹ ಪರಿಸ್ತಿತಿಗೆ ಸಿಲುಕುವ ಅದೆಷ್ಟೋ ಘಟನೆಗಳು ಕಣ್ಮುಂದೆ ನಡೆಯುತ್ತಿರುವ ಇಂದಿನ ದಿನಗಳಲ್ಲಿ ತವರಿಗೆ ವಾಪಾಸ್ ಆದ ಮಗಳನ್ನು ಆತ್ಮೀಯವಾಗಿ ಸ್ವಾಗತಿಸಿದ ಈ ತಂದೆಯ ಕೆಲಸ ನಿಜಕ್ಕೂ ಎಲ್ಲರಿಗೂ ಮಾದರಿ.