ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಕೋರಮಂಗಲದ ಹುಕ್ಕಾ ಕೆಫೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ನೋಡ ನೋಡುತ್ತಿದ್ದಂತೆ 4 ಸಿಲಿಂಡರ್ ಗಳು ಸ್ಫೋಟಗೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಪಬ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಕೋರಮಂಗಲದ ಮಡ್ ಪೈಪ್ ಹುಕ್ಕಾ ಕೆಫೆಯ ನಾಲ್ಕನೇ ಮಹಡಿಯಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಕ್ಷಣಾರ್ಧದಲ್ಲಿ ಇಡೀ ಕೆಫೆ ಆಹುತಿಯಾಗಿದೆ. ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ನಾಲ್ಕನೇ ಮಹಡಿಯ ಕೆಳಭಾಗಕ್ಕೂ ಬೆಂಕಿ ಆವರಿಸಿದ್ದು, ಐಷಾರಾಮಿ ಕಾರು,ಬೈಕ್ ಗಳು ಬೆಂಕಿಗಾಹುತಿಯಾಗಿವೆ.
ಬೆಂಕಿಯ ತೀವ್ರತೆಗೆ ಜೀವ ಉಳಿಸಿಕೊಳ್ಳಲು ಓರ್ವ ವ್ಯಕ್ತಿ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುವನ್ನು ಪ್ರೇಮ್ ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ತಹಬದಿಗೆ ತಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.