ಕಚೇರಿಯಲ್ಲಿ ಪ್ರತಿನಿತ್ಯ ಕೆಲಸ ಮಾಡುವವರು ತಮ್ಮ ಬೇಸರ, ಕೆಲಸದ ಒತ್ತಡ ಮತ್ತು ಹತಾಶೆಯನ್ನು ಮೇಲಧಿಕಾರಿಗಳೊಂದಿಗೆ ಹೊರಹಾಕಲು ಸಾಧ್ಯವಾಗದೇ ತಮಗೆ ತಾವೇ ಹೇಳಿಕೊಂಡು ಗೊಣಗುತ್ತಿರುತ್ತಾರೆ. ಆದರೆ ಇಂತಹ ಒತ್ತಡ, ಹತಾಶೆ ಹೆಚ್ಚಾದಾಗ ನೊಂದ ಉದ್ಯೋಗಿ ಅದನ್ನು ಹೊರಹಾಕಲೇ ಬೇಕಾಗುತ್ತದೆ.
ಅಂತಹ ಪರಿಸ್ಥಿತಿಯೊಂದರಲ್ಲಿ ನೊಂದ ಕಿರಿಯ ನೌಕರನೊಬ್ಬ ಆನ್ ಲೈನ್ ಮೀಟಿಂಗ್ ವೇಳೆಯೇ ಹಿರಿಯ ಉದ್ಯೋಗಿ ಮೇಲೆ ತನ್ನ ಕೆಲಸದ ಒತ್ತಡವನ್ನ ಹೊರಹಾಕಿದ್ದ. ಉದ್ಯೋಗಿಗಳ ನಡುವೆ ನಡೆದ ಈ ಮಾತಿನ ಚಕಮಕಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವೀಡಿಯೊದಲ್ಲಿ ಜೂಮ್ ಮೀಟಿಂಗ್ ನಲ್ಲಿ ತಮ್ಮ ಕೆಲಸಕ್ಕೆ ಸಂಬಂಧಿಸಿದ ವಿಷಯಗಳನ್ನು ತಿಳಿಸುವಂತೆ ಹೇಳಲಾಗಿದೆ. ಅವರಲ್ಲಿ ಹಿರಿಯ ನೌಕರ ದಿಲೀಪ್ ಕುಮಾರ್ ಅವರು ಸಭೆಯಲ್ಲಿ ಮಾತನಾಡುತ್ತಿರುವುದನ್ನು ಕಾಣಬಹುದು.
ಅವರು ಅಧಿಕಾರದ ಗತ್ತಿನಲ್ಲಿ ಮಾತನಾಡುತ್ತಾ “ನಿಮ್ಮ ಮುಂಬರುವ ವರದಿಯನ್ನು ಸಮಯಕ್ಕೆ ಸರಿಯಾಗಿ ತಲುಪಿಸಬೇಕು; ಇಲ್ಲದಿದ್ದರೆ ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ನೀವು ಶನಿವಾರ ಮತ್ತು ಭಾನುವಾರದಂದು ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ” ಎಂದಿದ್ದಾರೆ. ಇದಕ್ಕೆ ಕೋಪಗೊಂಡ ಕಿರಿಯ ಉದ್ಯೋಗಿ ನಿಖಿಲ್ ಮಧ್ಯಪ್ರವೇಶಿಸಿ, ” ಶನಿವಾರ ಮತ್ತು ಭಾನುವಾರ ಕೆಲಸ ಮಾಡುವುದರ ಅರ್ಥವೇನು?” ಎಂದು ವಾರಾಂತ್ಯದ ವೇಳೆ ಕೆಲಸದ ಹೊರೆಯ ಹತಾಶೆಯನ್ನು ಗಟ್ಟಿದನಿಯಲ್ಲಿ ಹೊರಹಾಕುತ್ತಾರೆ.
ಆದಾಗ್ಯೂ ಹಿರಿಯ ನೌಕರ “ಬಾಕಿ ಉಳಿದಿರುವ ವರದಿಯನ್ನು ಯಾರು ಪೂರ್ಣಗೊಳಿಸುತ್ತಾರೆ?” ಎಂದಾಗ ಕಿರಿಯ ಉದ್ಯೋಗಿ ನಿಖಿಲ್ “ಸೋಮವಾರದೊಳಗೆ ಸಂಪೂರ್ಣ ವರದಿ ಸಿದ್ಧವಾಗಲಿದೆ ಎಂದು ನಾನು ಈಗಾಗಲೇ ನಿಮಗೆ ತಿಳಿಸಿದ್ದೇನೆ. ನೀವು ಅದನ್ನು ಏಕೆ ಅರ್ಥಮಾಡಿಕೊಳ್ಳುತ್ತಿಲ್ಲ ? ” ಎಂದು ಜೋರಾಗಿ ಪ್ರಶ್ನಿಸಿದರು.
ಆಗ ಹಿರಿಯ ಸಹೋದ್ಯೋಗಿಯು ತನ್ನೊಂದಿಗೆ ಗೌರವಯುತವಾಗಿ ಮಾತನಾಡಬೇಕು. ನನ್ನ ಎಲ್ಲಾ ಆದೇಶಗಳನ್ನು ಅನುಸರಿಸಬೇಕು ಎಂದು ಒತ್ತಾಯಿಸಿದಾಗ ಮೀಟಿಂಗ್ ಮತ್ತೊಂದು ತಿರುವು ಪಡೆಯಿತು. ಸುಮ್ಮನಿರದ ನಿಖಿಲ್ “ನೀವು ನನ್ನೊಂದಿಗೆ ಗೌರವಯುತವಾಗಿ ಮಾತನಾಡಬೇಕು, ನೀವು ಆದೇಶಗಳನ್ನು ನೀಡುವುದನ್ನು ತುಂಬಾ ಆನಂದಿಸಿದರೆ ಅದನ್ನು ಸ್ವಿಗ್ಗಿ ಮೂಲಕ ಮಾಡಬಹುದು.” ಎಂದು ಸಿಟ್ಟಿಗೆದ್ದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ಉಲ್ಬಣಗೊಂಡಿತು.
ಹತಾಶೆಗೊಂಡ ಕಿರಿಯ ಉದ್ಯೋಗಿ ನಿಖಿಲ್ ತಮ್ಮ ಕರ್ತವ್ಯಗಳನ್ನು ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವುದರಿಂದ ತಮ್ಮ ಜೀವನೋಪಾಯಕ್ಕಾಗಿ ಸಾಧಾರಣ ಆದಾಯವನ್ನು ಗಳಿಸುತ್ತಿದ್ದೇವೆ. ನೀವೇನೂ ನನ್ನನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡಲು ಹೋಗುತ್ತಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.