ಕೇರಳದ ಲುಲು ಮಾಲ್ ನಲ್ಲಿ ಪಾಕಿಸ್ತಾನದ ಧ್ವಜವು ಭಾರತೀಯ ಧ್ವಜದ ಮೇಲಿದೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಸುಳ್ಳು ಮಾಹಿತಿಯನ್ನು ಹರಡಿದ್ದಕ್ಕಾಗಿ ಬಿಜೆಪಿ ಮಹಿಳಾ ಘಟಕದ ನಾಯಕಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶಕುಂತಲಾ ನಟರಾಜ್ ಅವರು ಪೋಸ್ಟ್ ಮಾಡಿದ ಚಿತ್ರವನ್ನು ಸತ್ಯ ಪರಿಶೀಲನೆಯ ನಂತರ ಜಯನಗರ ಪೊಲೀಸ್ ಠಾಣೆಯ ಪಿಎಸ್ಐ ಮಹಾಲಕ್ಷ್ಮಮ್ಮ ಎಚ್.ಎನ್ ಅವರು ಎಫ್ಐಆರ್ ದಾಖಲಿಸಿದ್ದಾರೆ.
ಐಪಿಸಿ 153 (ಬಿ) ಅಡಿಯಲ್ಲಿ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ವಿಚಾರಣೆಗೆ ಬರುವಂತೆ ಶಕುಂತಲಾ ಅವರಿಗೆ ಸೂಚಿಸಿದ್ದಾರೆ. ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಕಾರ್ಯಕರ್ತೆ ಶಕುಂತಲಾ ನಟರಾಜ್ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.
ಏನಿದು ಘಟನೆ..?
ಶಕುಂತಲಾ ನಟರಾಜ್ ಅವರು ಕೇರಳದ ಲುಲು ಮಾಲ್ ಚಿತ್ರವನ್ನು ಹಂಚಿಕೊಂಡಿದ್ದರು. ಅದರಲ್ಲಿ ಪಾಕಿಸ್ತಾನದ ಧ್ವಜವು ಭಾರತೀಯ ಧ್ವಜಕ್ಕಿಂತ ಎತ್ತರವಾಗಿದೆ. ಲುಲು ಮಾಲ್ ಬಹಿಷ್ಕರಿಸುವಂತೆ ಶಕುಂತಲಾ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿದ್ದರು. ಆದಾಗ್ಯೂ, ಮಾಲ್ ವಿಶ್ವಕಪ್ನಲ್ಲಿ ಭಾಗವಹಿಸುವ ಎಲ್ಲಾ ದೇಶಗಳ ಧ್ವಜಗಳನ್ನು ಪ್ರದರ್ಶಿಸಿತು. ಫ್ಯಾಕ್ಟ್ ಚೆಕ್ ವರದಿಗಳ ಪ್ರಕಾರ, ಶಕುಂತಲಾ ಹಂಚಿಕೊಂಡ ಚಿತ್ರವನ್ನು ಸೈಡ್ ಕೋನದಿಂದ ಕ್ಲಿಕ್ ಮಾಡಲಾಗಿದ್ದು, ಇದು ಪಾಕಿಸ್ತಾನದ ಧ್ವಜವು ಭಾರತೀಯ ಧ್ವಜಕ್ಕಿಂತ ಎತ್ತರವಾಗಿದೆ ಎಂದು ತೋರುತ್ತದೆ.
ಭಾರತದ ಬಾವುಟಕ್ಕಿಂತ ಬೇರೆ ಯಾವುದೇ ಬಾವುಟ ಎತ್ತರದಲ್ಲಿ ಇರಬಾರದು ಅನ್ನೋ ಸಾಮಾನ್ಯ ಜ್ಞಾನ ಇಲ್ಲವೇ ನಿಮ್ಮ ಮಾಲ್ ನವರಿಗೆ? ಡಿಕೆ ಶಿವಕುಮಾರ್ ಅವರೇ ಎಂದು… ಶಕುಂತಲಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.