ಬೆಂಗಳೂರು: ವೈದ್ಯಕೀಯ ಸೀಟು ಪಡೆಯಲು ಸುಳ್ಳು ದಾಖಲೆ ಸೃಷ್ಟಿಸಿದ ಎರಡು ಪ್ರಕರಣಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪತ್ತೆ ಮಾಡಿದೆ.
ನೀಟ್ ರ್ಯಾಂಕಿಂಗ್ ಕಾರ್ಡ್, ಸೀಟು ಹಂಚಿಕೆಯಾದ ಪತ್ರ, ಶುಲ್ಕ ಪಾವತಿ ರಶೀದಿ ಸೇರಿದಂತೆ ಪ್ರಮುಖ ದಾಖಲೆಗಳನ್ನು ನಕಲು ಮಾಡಿ ಪ್ರವೇಶ ಪಡೆಯಲು ಯತ್ನಿಸಿದ ವೇಳೆ ಸಿಕ್ಕಿ ಬಿದ್ದಿದ್ದಾರೆ.
ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಶಿವಮೊಗ್ಗ ಮೆಡಿಕಲ್ ಕಾಲೇಜಿಗೆ ಪ್ರವೇಶ ಪಡೆಯಲು ನಕಲಿ ದಾಖಲೆ ಸೃಷ್ಟಿಸಿದ ವಿದ್ಯಾರ್ಥಿನಿಯರು ಪ್ರವೇಶ ಪಡೆಯಲು ಮುಂದಾಗಿದ್ದರು. ಕಾಲೇಜಿಗೆ ಪ್ರವೇಶಕ್ಕೆ ಹೋದ ಸಂದರ್ಭದಲ್ಲಿ ದಾಖಲಾತಿ ಮಾಡಿಕೊಳ್ಳಲು ಮುಂದಾದಾಗ ಪ್ರಾಧಿಕಾರದ ವೆಬ್ ಪೋರ್ಟನಲ್ಲಿ ಸೀಟು ಹಂಚಿಕೆ ಮಾಹಿತಿ ಇಲ್ಲದಿರುವುದು ಕಂಡುಬಂದಿದ್ದು, ಕಾಲೇಜುಗಳ ಆಡಳಿತ ಮಂಡಳಿ ಪ್ರಾಧಿಕಾರಕ್ಕೆ ಮಾಹಿತಿ ನೀಡಿದೆ.
ನಂತರ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ ಹೆಚ್ಚಿನ ತನಿಖೆಗಾಗಿ ಮಲ್ಲೇಶ್ವರಂ ಪೋಲಿಸರಿಗೆ ದೂರು ನೀಡಲಾಗಿದೆ.
ಮತ್ತೊಂದು ಪ್ರಕಾರಣದಲ್ಲಿ ವಿದ್ಯಾರ್ಥಿನಿ ಇದೇ ರೀತಿ ನಕಲಿ ದಾಖಲೆ ಸೃಷ್ಟಿಸಿ ಸೀಟು ಪಡೆಯಲು ಅರ್ಹತೆ ಇದ್ದರೂ ಕೆಇಎ ತಮಗೆ ಸೀಟು ಹಂಚಿಕೆ ಮಾಡಿಲ್ಲವೆಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಹತೆ ಇದ್ದರೂ ಸೀಟು ಹಂಚಿಕೆ ಮಾಡದ ಬಗ್ಗೆ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನಂತರ ಅಚ್ಚರಿಯಾದ ಕೆಇ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಗೊತ್ತಾಗಿದೆ. ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟ ನಂತರ ವಿದ್ಯಾರ್ಥಿನಿ ಪರ ವಕೀಲರು ಕೇಸ್ ವಾಪಸ್ ಪಡೆದುಕೊಂಡಿದ್ದಾರೆ.