ಬೆಂಗಳೂರು: ಡ್ರೈವಿಂಗ್ ಲೈಸೆನ್ಸ್ ಮತ್ತು ವೆಹಿಕಲ್ ರಿಜಿಸ್ಟ್ರೇಷನ್ ಸ್ಮಾರ್ಟ್ ಕಾರ್ಡ್ ಗಳನ್ನು ಕಡ್ಡಾಯವಾಗಿ ಸ್ಪೀಡ್ ಪೋಸ್ಟ್ ನಲ್ಲಿ ಕಳುಹಿಸುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಆಗಸ್ಟ್ 18ರಂದು ಅಂಚೆ ಇಲಾಖೆಯೊಂದಿಗೆ ಸ್ಮಾರ್ಟ್ ಕಾರ್ಡ್ ಗಳನ್ನು ಸ್ಪೀಡ್ ಪೋಸ್ಟ್ ನಲ್ಲಿ ಕಳುಹಿಸಲು ಒಡಂಬಡಿಕೆ ಮಾಡಿಕೊಂಡಿದ್ದರೂ ಮಧ್ಯವರ್ತಿಗಳ ಅನುಕೂಲಕ್ಕಾಗಿ ಕೆಲವು ಕಚೇರಿಗಳಲ್ಲಿ ಇದನ್ನು ಪಾಲಿಸುತ್ತಿರಲಿಲ್ಲ ಎನ್ನಲಾಗಿದೆ. ಅಕ್ಟೋಬರ್ 12ರಂದು ಆಯುಕ್ತ ಎ.ಎಂ. ಯೋಗೇಶ್ ಕುಮಾರ್ ಕಡ್ಡಾಯವಾಗಿ ಸ್ಪೀಡ್ ಪೋಸ್ಟ್ ನಲ್ಲಿ ಡಿಎಲ್, ಆರ್.ಸಿ. ಕಾರ್ಡ್ ಕಳುಹಿಸುವಂತೆ ಆದೇಶ ಹೊರಡಿಸಿದ್ದು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಸ್ಪೀಡ್ ಪೋಸ್ಟ್ ನಲ್ಲಿ ಡಿಎಲ್, ಆರ್.ಸಿ. ಕಳುಹಿಸುವುದರಿಂದ ದುರ್ಬಳಕೆ ಆಗುವುದಿಲ್ಲ. ಅರ್ಜಿದಾರರಿಗೆ ಅಂಚೆ ಇಲಾಖೆ ಕಾರ್ಡ್ ಗಳನ್ನು ತಲುಪಿಸುತ್ತದೆ. ಅರ್ಜಿದಾರರು ತಮ್ಮ ಕಾರ್ಡ್ ಬಗ್ಗೆ ಟ್ರ್ಯಾಕ್ ಮಾಡಲು ಅವಕಾಶ ಇದೆ. ನೇರವಾಗಿ ಅರ್ಜಿದಾರನ ಮನೆ ಬಾಗಿಲಿಗೆ ಡಿಎಲ್, ಆರ್.ಸಿ. ತಲುಪಿದರೆ ತಮಗೆ ಆದಾಯ ಬರಲ್ಲವೆಂದು ಮಧ್ಯವರ್ತಿಗಳು ವಿರೋಧಿಸುತ್ತಿದ್ದಾರೆ. ವಿಳಂಬವಾಗಿ ಕಾರ್ಡ್ ಗಳು ತಲುಪುವುದರಿಂದ ಸಮಸ್ಯೆಯಾಗುತ್ತದೆ ಎಂದು ಬೆಂಗಳೂರು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದಿಂದ ಮನವಿ ಸಲ್ಲಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿದ ಆಯುಕ್ತರು ಸ್ಪೀಡ್ ಪೋಸ್ಟ್ ನಲ್ಲೇ ಡಿಎಲ್, ಆರ್.ಸಿ. ಕಾರ್ಡ್ ಕಡ್ಡಾಯವಾಗಿ ಕಳುಹಿಸುವಂತೆ ಆದೇಶ ಹೊರಡಿಸಿದ್ದಾರೆ.