ನವದೆಹಲಿ: 43 ವರ್ಷದ ಟ್ಯಾಕ್ಸಿ ಚಾಲಕನನ್ನು 1 ಕಿಲೋಮೀಟರ್‌ಗೂ ಹೆಚ್ಚು ಎಳೆದೊಯ್ದು, ಆತನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಕದ್ದ ವಾಹನವಾದ ಸ್ವಿಫ್ಟ್ ಡಿಜೈರ್ ಅನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3, ಎನ್-ಎಚ್-8 ರ ಬಳಿ ಘಟನೆ ನಡೆದಿದ್ದು, ಬಲಿಪಶುವನ್ನು ಎಳೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಹತ್ಯೆಯಾದ ಟ್ಯಾಕ್ಸಿ ಚಾಲಕನನ್ನು ಬಿಜೇಂದರ್ ಶಾ ಎಂದು ಗುರುತಿಸಲಾಗಿದೆ. ಅವರು ಫರಿದಾಬಾದ್‌ನ ಸೂರ್ಯ ಕಾಲೋನಿಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಸಾಲ ಮಾಡಿ ಮಾರ್ಚ್‌ನಲ್ಲಿ ಕಾರನ್ನು ಖರೀದಿಸಿದ್ದರು.
ಶಂಕಿತ ಆರೋಪಿಗಳನ್ನು ಮೊಹಮ್ಮದ್ ಆಸಿಫ್ ಮತ್ತು ಮೊಹಮ್ಮದ್ ಮೆಹರಾಜ್ ಎಂದು ಗುರುತಿಸಲಾಗಿದೆ. ಅವರು ಮೀರತ್ ನಿವಾಸಿಗಳಾಗಿದ್ದು, 15 ಪ್ರಕರಣಗಳೊಂದಿಗೆ ವ್ಯಾಪಕ ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾರೆ. ಸಾಕೇತ್‌ನಲ್ಲಿ ಟ್ಯಾಕ್ಸಿಯನ್ನು ನಿಲ್ಲಿಸಿದ ಖದೀಮರು, ಪ್ರಯಾಣಿಕರಂತೆ ನಟಿಸಿದ್ರು. ನಂತರ ದೆಹಲಿ ಕಂಟೋನ್ಮೆಂಟ್ ಬಳಿ ಶಾ ಮೇಲೆ ದಾಳಿ ಮಾಡಿದ್ರು. ನಂತರ ಅವರನ್ನು ಒಂದು ಕಿಲೋಮೀಟರ್ ವರೆಗೆ ಎಳೆದೊಯ್ದು, ಶವವನ್ನು ಎಸೆದು ಕಾರು ಸಹಿತ ಪರಾರಿಯಾಗಿದ್ದರು.
ಘಟನೆಯಲ್ಲಿ ಟ್ಯಾಕ್ಸಿ ಚಾಲಕನನ್ನು ಗನ್ ತೋರಿಸಿ ದರೋಡೆ ಮಾಡಲಾಗಿತ್ತು. ಮಾರ್ಗದುದ್ದಕ್ಕೂ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಅಪರಾಧಿಗಳು ಕಾರನ್ನು ಮೀರತ್‌ಗೆ ಕೊಂಡೊಯ್ದಿದ್ದಾರೆ ಎಂದು ಕಂಡುಕೊಂಡಿದ್ದಾಗಿ ಪೊಲೀಸ್ ಮೂಲಗಳು ಬಹಿರಂಗಪಡಿಸಿದೆ.