ಬೆಂಗಳೂರು : ಬರದ ಬೇಗೆಯಲ್ಲಿ ಬಸವಳಿಯುತ್ತಿದ್ದ ರಾಜ್ಯದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ರಾಜ್ಯದಲ್ಲಿ ಹಲವು ಕಡೆ ಸದ್ದಿಲ್ಲದೇ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ.
ಹೌದು. ರಾಜ್ಯದಲ್ಲಿ ಮುಂಗಾರು ಕೊರತೆಯಿಂದಾಗಿ ವಿದ್ಯುತ್ ಬೇಡಿಕೆಯಲ್ಲಿ ತೀವ್ರಗತಿಯ ಹೆಚ್ಚಳವಾಗಿರುವುದರಿಂದ ಸದ್ದಿಲ್ಲದೇ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ. ರಾಜ್ಯದಲ್ಲಿ ಈ ಬಾರಿ ಮಳೆ ಕೈಕೊಟ್ಟಿರುವುದರಿಂದ ನಿರೀಕ್ಷೆಯಂತೆ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಪ್ರತಿ ನಿತ್ಯ ಅಗತ್ಯಕ್ಕಿಂತ 40ರಿಂದ 50 ಮಿಲಿಯನ್ ಯೂನಿಟ್ ವಿದ್ಯುತ್ ಕೊರತೆ ಎದುರಿಸುತ್ತಿದೆ. ಈ ಹಿನ್ನೆಲೆ ಸದ್ದಿಲ್ಲದೇ ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ.
ವಿದ್ಯುತ್ ಸರಿಯಾಗಿ ಸಿಗದ ಕಾರಣ ಸಮರ್ಪಕ ನೀರು ಬಿಡಲಾಗದೇ ಬೆಳೆಗಳು ಒಣಗುತ್ತಿದ್ದು, ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಾರಿ ಮಳೆ ಆಗದ ಕಾರಣ ರೈತರು ಬಾವಿ ನೀರಿಗೆ ಅವಲಂಬಿಸಿದ್ದು, ಹೀಗಾಗಿ ಹೆಚ್ಚಿನ ವಿದ್ಯುತ್ ಬೇಡಿಕೆ ಉಂಟಾಗಿದೆ ಎಂದು ಹೇಳಲಾಗಿದೆ. ಮಳೆಯಾದರೆ ವಿದ್ಯುತ್ ಬೇಡಿಕೆ ಪ್ರಮಾಣ ಕಡಿಮೆಯಾಗಲಿದ್ದು, ಮುಂದಿನ ಮಳೆಗಾಲದವರೆಗೂ ಈ ಸಮಸ್ಯೆ ಮುಂದುವರೆಯಲಿದೆ ಎನ್ನಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿದ್ಯುತ್ ಅಭಾವದಿಂದ ಬೆಳೆಗಳು ಒಣಗುತ್ತಿವೆ. ನಾಲೆಗಳಲ್ಲೂ ನೀರಿಲ್ಲ, ಬೋರ್ ವೆಲ್ ಗಳಿಂದ ಪಂಪ್ ಮಾಡಲು ವಿದ್ಯುತ್ತೂ ಇಲ್ಲ. ಮೊದಲೇ ಕಷ್ಟದಲ್ಲಿರುವ ರೈತನ ಬೆನ್ನಿನ ಮೇಲೆ ಬರೆಯ ಮೇಲೆ ಬರೆ ಎಳೆಯುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕೂಡ ವಾಗ್ಧಾಳಿ ನಡೆಸಿದ್ದಾರೆ.