ಬೆಂಗಳೂರು: ಆರ್.ಆರ್.ನಗರ ಕ್ಷೇತ್ರಕ್ಕೆ ಅನುದಾನ ಕಡಿತಗೊಳಿಸಿರುವ ಕ್ರಮ ಖಂಡಿಸಿ ಬಿಜೆಪಿ ಶಾಸಕ ಮುನಿರತ್ನ ಸರ್ಕಾರದ ವಿರುದ್ಧ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.
ವಿಧಾನಸೌಧದ ಮುಂಭಾಗ ಗಾಂಧಿ ಪ್ರತಿಮೆ ಬಳಿ ಬೆಂಬಲಿಗರ ಜೊತೆಗೂಡಿ ಶಾಸಕ ಮುನಿರತ್ನ ಧರಣಿ ಕುಳಿತಿದ್ದರು. ಈ ವೇಳೆ ಶಾಸಕರನ್ನು ಹೊರತುಪಡಿಸಿ ಬೆಂಬಲಿಗರಿಗೆ ಧರಣಿಗೆ ಅನುಮತಿಯಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುನಿರತ್ನ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುನಿರತ್ನ ಅವರ 25ಕ್ಕೂ ಹೆಚ್ಚು ಬೆಂಬಲಿಗರನ್ನು ವಶಕ್ಕೆ ಪಡೆಯಲಾಗಿದ್ದು, ಗಾಂಧಿ ಪ್ರತಿಮೆ ಬಳಿ ಮುನಿರತ್ನ ಒಬ್ಬರೇ ಸರ್ಕಾರದ ವಿರುದ್ಧ ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ಮುಂದುವರೆಸಿದ್ದಾರೆ.
ತಮ್ಮ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನು ಕಡಿತಗೊಳಿಸಿ ಯಶವಂತಪುರ, ಬ್ಯಾಟರಾಯನಪುರ ಕ್ಷೇಟ್ರಗಳಿಗೆ ಹಂಚಲಾಗಿದೆ. ಆರ್.ಆರ್.ನಗರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕರು ಆಗ್ರಹಿಸಿದ್ದಾರೆ.