ಶಿವಮೊಗ್ಗ: ಸುಳ್ಳು ಜಾತಿ ನಮೂದು ಮಾಡಿದ ಸರ್ಕಾರಿ ನೌಕರರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಜೆಎಂಎಫ್ ಸಿ ನ್ಯಾಯಾಲಯ ವಿಚಾರಣೆ ನಡೆಸಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಸರ್ಕಾರಿ ನೌಕರನಿಗೆ 2 ವರ್ಷ 3 ತಿಂಗಳು ಜೈಲು ಶಿಕ್ಷೆ, 11,000 ರೂ.ದಂಡ ವಿಧಿಸಿದೆ.
ಸೊರಬ ತಾಲೂಕು ಸುತ್ತುಕೋಟೆ ವೃತ್ತದ ಪ್ರಭಾರ ಕಂದಾಯ ನಿರೀಕ್ಷಕ ಮೋಹನ್ ಕುಮಾರ್ ಶಿಕ್ಷೆಗೆ ಒಳಗಾದವರು. ಅವರ ತಂದೆ ಮೃತರಾದ ನಂತರ ಅನುಕಂಪದ ಆಧಾರದ ಮೇಲೆ ಅಂಜನಾಪುರ ಹೋಬಳಿಯ ಭದ್ರಾಪುರದ ಗ್ರಾಮ ಲೆಕ್ಕಾಧಿಕಾರಿಯಾಗಿ 1997ರಲ್ಲಿ ಸೇವೆಗೆ ಸೇರಿದ್ದರು.
ಅವರ ತಂದೆಯ ಸೇವಾ ಪುಸ್ತಕದಲ್ಲಿ ಗಂಗಾಮತ ಎಂದು ನಮೂದಾಗಿತ್ತು. ಶಿವಕುಮಾರ್ ಶಾಲಾ ದಾಖಲೆಯಲ್ಲಿ ಹಿಂದೂ ಭೋವಿ ಎಂದು ನಮೂದಾಗಿದ್ದು, ಅದನ್ನೇ ದಾಖಲೆಯಾಗಿ ಬಳಸಿಕೊಂಡು ಸೇವಾ ಪುಸ್ತಕದಲ್ಲಿಯೂ ಹಿಂದೂ ಭೋವಿ ಎಂದು ನಮೂದಿಸಿ ಮುಂಬಡ್ತಿಗೆ ಪ್ರಯತ್ನ ನಡೆಸಿದ್ದರು. ಗಂಗಾಮತ ಜಾತಿಯವರಾಗಿದ್ದರೂ ನೇಮಕಾತಿ ಪ್ರಾಧಿಕಾರಕ್ಕೆ ಸುಳ್ಳು ಪ್ರಮಾಣ ಪತ್ರ ನೀಡಿ ವಂಚಿಸಿರುವುದಾಗಿ ಕಂದಾಯ ಇಲಾಖೆಯಿಂದ 2010 ರಲ್ಲಿ ಶಿಕಾರಿಪುರ ಠಾಣೆಗೆ ದೂರು ನೀಡಲಾಗಿತ್ತು.
ಪೊಲೀಸರು ಕೋರ್ಟ್ ಗೆ ಆರೋಪ ಪಟ್ಟಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್. ಯಶವಂತ ಕುಮಾರ್ ಅವರು ಸುಳ್ಳು ಮಾಹಿತಿ ನೀಡಿದ ಶಿವಕುಮಾರ್ ಗೆ ಮೂರು ತಿಂಗಳ ಸಾದಾ ಸಜೆ, ಒಂದು ಸಾವಿರ ರೂ. ದಂಡ, ಅಪರಾಧ ಎಸಗಿದ್ದಕ್ಕೆ ಎರಡು ವರ್ಷ ಸಾದಾ ಸಜೆ, 10,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.