ಬೆಂಗಳೂರು: ದಸರಾ ಹಬ್ಬದ ವೇಳೆಗೆ ನಿಗಮ -ಮಂಡಳಿಗಳಿಗೆ ನೇಮಕಾತಿ ನಡೆಯಲಿದೆ. 25 ರಿಂದ 30 ಹಿರಿಯ ಶಾಸಕರಿಗೆ ಹುದ್ದೆ ನೀಡಲು ಚಿಂತನೆ ನಡೆದಿದ್ದು, ಅರ್ಹರ ಪಟ್ಟಿ ತಯಾರಿಸಲು ಅಕ್ಟೋಬರ್ 14 ಅಥವಾ 15 ರಂದು ಸಭೆ ನಡೆಯುವ ಸಾಧ್ಯತೆ ಇದೆ.
ಮೂರ್ನಾಲ್ಕು ಸಲ ಶಾಸಕರಾಗಿರುವವರಿಗೆ ಹಾಗೂ ಕೆಲವು ವಿಧಾನ ಪರಿಷತ್ ಸದಸ್ಯರಿಗೆ ದಸರಾ ಹಬ್ಬದ ಕೊಡುಗೆಯಾಗಿ ನಿಗಮ -ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ. ರಾಜ್ಯದಲ್ಲಿ 180ಕ್ಕೂ ಹೆಚ್ಚು ನಿಗಮ, ಮಂಡಳಿಗಳಿದ್ದು, ಅಧ್ಯಕ್ಷರಾಗಲು ಶಾಸಕರು, ಮುಖಂಡರಿಂದ ಒತ್ತಡ ಬರುತ್ತಿದೆ.
ಈಗ ನೇಮಕಾತಿ ಆರಂಭಿಸಿದಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದ್ದು, ಇದರಿಂದ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎನ್ನುವ ಆತಂಕ ಇದೆ. ಹೀಗಾಗಿ ಚುನಾವಣೆ ಬಳಿಕ ನೇಮಕಾತಿ ಆರಂಭಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಸುಮಾರು 30 ಶಾಸಕರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಪಟ್ಟಿ ಸಿದ್ಧಪಡಿಸಲು ಅಕ್ಟೋಬರ್ 14 ಅಥವಾ 15 ರಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಭೆ ನಡೆಸಿ, ನಿಗಮ- ಮಂಡಳಿ ನೇಮಕಾತಿಯ ಮೊದಲ ಪಟ್ಟಿ ಸಿದ್ಧಪಡಿಸಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.