ರಾಮಮಂದಿರ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯದ ಇತ್ತೀಚಿನ ಚಿತ್ರಗಳನ್ನು ಬಿಡುಗಡೆ ಮಾಡಿದೆ.
ಕಾರ್ಮಿಕರು ಮಂದಿರ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದು ಸಿನ್ಹ್ ದ್ವಾರ, ನೃತ್ಯ ಮಂಟಪ ಮತ್ತು ಅಲ್ಲಿನ ನೆಲದ ಮೇಲೆ ಕೆತ್ತನೆಗಳು ನಡೆಯುತ್ತಿರುವ ಫೋಟೋಗಳನ್ನು ಹಂಚಿಕೊಂಡಿದೆ.
ದೇವಾಲಯದ ನಿರ್ಮಾಣವು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವ ಹಾದಿಯಲ್ಲಿದೆ ಎಂದು ಟ್ರಸ್ಟ್ ಹೇಳಿದೆ. ನೆಲ ಅಂತಸ್ತಿನ ಕಾಮಗಾರಿಯನ್ನು ನವೆಂಬರ್ ನಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದ್ದು, ಡಿಸೆಂಬರ್ ಅಂತ್ಯದೊಳಗೆ ಮೊದಲ ಮಹಡಿಯ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಟ್ರಸ್ಟ್ ಹೊಂದಿದೆ.
2024ರ ಜನವರಿಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದೆ. ಮೂರು ಮಹಡಿಯ ದೇಗುಲದ ನೆಲಮಹಡಿಯನ್ನು ಜನವರಿಯಲ್ಲಿ ಭಕ್ತಾದಿಗಳ ಪ್ರವೇಶಕ್ಕೆ ಮುಕ್ತವಾಗಿರಿಸಲಾಗುತ್ತದೆ. ಇಡೀ ದೇಗುಲದ ನಿರ್ಮಾಣ ಕಾರ್ಯ 2025ಕ್ಕೆ ಮುಗಿಯುವ ನಿರೀಕ್ಷೆಯಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಹಿಂದೆ 2024 ರ ಜನವರಿ 21-23 ರಂದು ದೇವಾಲಯದ ಶಂಕುಸ್ಥಾಪನೆ ಸಮಾರಂಭ ನಡೆಯಲಿದೆ ಎಂದು ಘೋಷಿಸಿತ್ತು. ಟ್ರಸ್ಟ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕೃತ ಆಹ್ವಾನ ಕಳಿಸಲಿದೆ. 136 ಸನಾತನ ಸಂಪ್ರದಾಯಗಳ 25,000 ಕ್ಕೂ ಹೆಚ್ಚು ಹಿಂದೂ ಧಾರ್ಮಿಕ ಮುಖಂಡರನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲು ಟ್ರಸ್ಟ್ ಯೋಜಿಸಿದೆ.
ಸಮಾರಂಭಕ್ಕೆ ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುತ್ತೇವೆ, ಪ್ರಮುಖ ಸಾಧುಗಳು ಮತ್ತು ಇತರ ಗಣ್ಯರು ಸಹ ಭಾಗವಹಿಸಲಿದ್ದಾರೆ ಎಂದು ರಾಮಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉದ್ಘಾಟನೆಗೂ ಮುನ್ನ ಅಯೋಧ್ಯೆಯನ್ನು ಸುಂದರಗೊಳಿಸಲು ಮತ್ತು ಅತ್ಯಾಧುನಿಕ ನಗರ ಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.