ಬೆಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ದೂರು ನೀಡಲಾಗಿದೆ.
ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಪ್ರದೀಪ್ ಈಶ್ವರ್ ವಿರುದ್ಧ ವಂದೇ ಮಾತರಂ ಸಮಾಜಸೇವಾ ಸಂಸ್ಥೆವತಿಯಿಂದ ಸ್ಪೀಕರ್ ಗೆ ಲಿಖಿತ ದೂರು ನೀಡಲಾಗಿದೆ.
ಪ್ರದೀಪ್ ಈಶ್ವರ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಜನ್- 10ರಲ್ಲಿ ಶಾಸಕ ಪ್ರದೀಪ್ ಈಶ್ವರ್ ಏಕಾಏಕಿ ಎಂಟ್ರಿಕೊಟ್ಟಿದ್ದು ಹಲವು ಅಚ್ಚರಿಗೆ ಕಾರಣವಾಗಿದೆ. ಅವರು ಸ್ಪರ್ಧಿಯಾಗಿ ಹೋಗಿದ್ದಾರಾ ಅಥವಾ ಅತಿಥಿಯಾಗಿ ಹೋಗಿದ್ದಾರಾ ಎಂಬ ಕುತೂಹಲ ಮೂಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಶಾಸಕರನ್ನು ವಜಾ ಮಾಡುವಂತೆ ಸ್ಪೀಕರ್ ಗೆ ದೂರು ನೀಡಲಾಗಿದೆ.