ಟ್ರಾನ್ಸ್ ಜೆಂಡರ್ ಮಹಿಳೆಯೊಬ್ಬರು ಇದೇ ಮೊಟ್ಟಮೊದಲ ಬಾರಿಗೆ ಮಿಸ್ ಪೋರ್ಚುಗಲ್ ಸೌಂದರ್ಯ ಸ್ಪರ್ಧೆಯನ್ನು ಗೆದ್ದು ಕಿರೀಟ ಧರಿಸಿದ್ದಾರೆ. ಸದ್ಯ ಸ್ಪರ್ಧೆಯಲ್ಲಿ ವಿಜೇತರಾಗಿರುವ ಟ್ರಾನ್ಸ್ ಜೆಂಡರ್ ಮಹಿಳೆ ಎಲ್ ಸಾಲ್ವಡಾರ್‌ನಲ್ಲಿ ವಿಶ್ವ ಸುಂದರಿ ಪ್ರಶಸ್ತಿಗಾಗಿ ಇನ್ನೊಬ್ಬ ಟ್ರಾನ್ಸ್ ಜೆಂಡರ್ ಮಹಿಳೆಯೊಂದಿಗೆ ಸ್ಪರ್ಧಿಸಲಿದ್ದಾರೆ ಎಂದು ಪೋರ್ಚುಗೀಸ್ ಮಾಧ್ಯಮ ವರದಿ ಮಾಡಿದೆ.
28 ವರ್ಷದ ಫ್ಲೈಟ್ ಅಟೆಂಡೆಂಟ್ ಮರೀನಾ ಮ್ಯಾಚೆಟೆ ಅವರು ಆಗ್ನೇಯ ಇವೊರಾ ಪ್ರದೇಶದ ಬೋರ್ಬಾದಲ್ಲಿ ಗುರುವಾರ ಮಿಸ್ ಪೋರ್ಚುಗಲ್ ಪ್ರಶಸ್ತಿಯನ್ನು ಪಡೆದರು.
“ಮಿಸ್ ಯೂನಿವರ್ಸ್ ಪೋರ್ಚುಗಲ್ ಪ್ರಶಸ್ತಿಗಾಗಿ ಸ್ಪರ್ಧಿಸಿದ ಮೊದಲ ಟ್ರಾನ್ಸ್ ಮಹಿಳೆ ಎಂಬುದಕ್ಕೆ ಹೆಮ್ಮೆಯಿದೆ” ಎಂದು ಅವರು ಪ್ರಶಸ್ತಿಯನ್ನು ಗೆಲ್ಲುವ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದರು. ನಾನು ಇದಕ್ಕಾಗಿ ಬಹಳ ವರ್ಷದಿಂದ ಪ್ರಯತ್ನಿಸುತ್ತಿದ್ದೆ. ಆದರೆ ಇದೀಗ ನನ್ನ ಪ್ರಯತ್ನ ಫಲಿಸಿದೆ ಎಂದು ಮರೀನಾ ಮ್ಯಾಚೆಟೆ ಹೇಳಿದ್ದರು.
ಜುಲೈನಲ್ಲಿ 22 ವರ್ಷದ ಡಚ್ ಮಹಿಳೆ ರಿಕ್ಕಿ ಕೊಲ್ಲೆ ಮಿಸ್ ನೆದರ್ ಲ್ಯಾಂಡ್ ಪ್ರಶಸ್ತಿಯನ್ನು ಗೆದ್ದ ಮೊದಲ ಟ್ರಾನ್ಸ್ ಜೆಂಡರ್ ಮಹಿಳೆಯಾಗಿದ್ದಾರೆ. ಇವರೊಂದಿಗೆ ಎಲ್ ಸಾಲ್ವಡಾರ್‌ನಲ್ಲಿ ವಿಶ್ವ ಸುಂದರಿ ಪ್ರಶಸ್ತಿಗಾಗಿ ಮರೀನಾ ಮ್ಯಾಚೆಟೆ ಸ್ಪರ್ಧಿಸಲಿದ್ದಾರೆ.
2018 ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಗಾಗಿ ಮೊದಲ ಟ್ರಾನ್ಸ್ ಜೆಂಡರ್ ಅಭ್ಯರ್ಥಿಯಾದ ಸ್ಪೇನ್‌ನ ಏಂಜೆಲಾ ಪೊನ್ಸ್ ಅವರ ಉತ್ತರಾಧಿಕಾರಿಯಾಗಿ ಮ್ಯಾಚೆಟ್ ಮತ್ತು ಕೊಲ್ಲೆ ಬರುತ್ತಾರೆ.