ಚಿತ್ರದುರ್ಗ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿ ಖಾತೆಗೆ ಹಣ ಜಮಾ ಆಗದ ಮನೆಯ ಯಜಮಾನಿಯರಿಗೆ ಸಿಎಂ ಸಿದ್ದರಾಮಯ್ಯ ಸಿಹಿಸುದ್ದಿ ನೀಡಿದ್ದು, ತಾಂತ್ರಿಕ ಸಮಸ್ಯೆ ಸರಿಪಡಿಸಿ ಹಣ ವರ್ಗಾವಣೆಯಾಗದ ಮಹಿಳೆಯರಿಗೆ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ,ಸರ್ಕಾರದಿಂದ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿ ಜನರ ಜೀವನ ಮಟ್ಟ ಸುಧಾರಣೆ ಮಾಡಲಾಗುತ್ತಿದೆ. 1.26 ಕೋಟಿ ಮಹಿಳೆಯರಿಗೆ ಗೃಹಲಕ್ಷೀ ಯೊಜನೆ ಜಾರಿ ಮಾಡಲಾಗಿದೆ. ಇದರಲ್ಲಿ 1.10 ಕೋಟಿ ಜನರಿಗೆ ತಲಾ ರೂ.2000 ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಇನ್ನೂ 16 ಲಕ್ಷ ಜನರಿಗೆ ಬ್ಯಾಂಕ್ ಖಾತೆ ಹಾಗೂ ಆಧಾರ್ ಜೋಡಣೆ ತೊಂದರೆಯಿಂದ ಹಣ ಜಮೆ ಆಗಿರುವುದಿಲ್ಲ. ಶೀಘ್ರವೇ 16 ಲಕ್ಷ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.
ಶಕ್ತಿ ಯೋಜನೆಯಡಿ 50 ರಿಂದ 60 ಲಕ್ಷ ಮಹಿಳೆಯರು ಪ್ರತಿನಿತ್ಯ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಕುಟುಂಬದ ಸದಸ್ಯರಿಗೆ ತಲಾ ಒಂದು 10 ಕೆ.ಜಿ. ಅಕ್ಕಿ ನೀಡಲು ತೀರ್ಮಾನಿಸಲಾಗಿದೆ. ಸದ್ಯ 5 ಕೆ.ಜಿ. ಅಕ್ಕಿ ನೀಡುತ್ತಿದ್ದು, ಉಳಿದ 5 ಕೆ.ಜಿ. ಅಕ್ಕಿ ಬದಲಿಗೆ ಹಣ ನೀಡಲಾಗುತ್ತಿದೆ ಎಂದರು.