ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಹಲವು ಫಲಾನುಭವಿಗಳ ಖಾತೆಗೆ 2,000 ರೂ. ಹಣ ವರ್ಗಾವಣೆ ಮಾಡಲಾಗಿದೆ. ಈಗಾಗಲೇ ಆಗಸ್ಟ್ ತಿಂಗಳಿನಲ್ಲಿ ಮೊದಲನೇ ಕಂತಿನ ಹಣ ಬಿಡುಗಡೆ ಆಗಿದ್ದು ಎರಡನೇ ಕಂತಿನ ಹಣ ಪಡೆಯಲು ಮಹಿಳೆಯರು ಕಾಯುತ್ತಿದ್ದಾರೆ.
ಈಗಾಗಲೇ ಹಲವರ ಖಾತೆಗೆ ಮೊದಲನೇ ಕಂತಿನ ಹಣ ಜಮಾ ಆಗಿದೆ. ಇನ್ನೂ, ಕೆಲವರ ಖಾತೆಗೆ ಹಣ ಜಮಾ ಆಗಿಲ್ಲ. ಯಾಕೆ ಹಣ ಜಮಾ ಆಗಿಲ್ಲ…? ಏನು ಕಥೆ ಎಂಬ ಸುಳಿವು ಕೂಡ ಕೆಲವು ಮಹಿಳೆಯರಿಗೆ ಇಲ್ಲ.
ಇನ್ನೂ ಹಣ ಬಾರದ ಮಹಿಳೆಯರು ಮೊದಲು ಲಿಸ್ಟ್ ನಲ್ಲಿ ನಿಮ್ಮ ಹೆಸರು ಉಂಟಾ ಎಂಬುದನ್ನು ಚೆಕ್ ಮಾಡಬಹುದು. ಸರ್ಕಾರ ಆ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಗೃಹಲಕ್ಷ್ಮಿ ಯೋಜನೆಯ ಹಣ ಯಾರು ಪಡೆದಿದ್ದಾರೆ, ಯಾರು ಹಣ ಪಡೆಯಲು ಸಾಧ್ಯವಾಗಿಲ್ಲ, ಯಾರು ಯೋಜನೆಗೆ ಅರ್ಹವಿಲ್ಲ ಎಂಬುದು ಸೇರಿದಂತೆ ಹಲವು ಮಾಹಿತಿ ಇರುತ್ತದೆ.
ಲಿಸ್ಟ್ ಎಲ್ಲಿ ಸಿಗುತ್ತದೆ..?
ನೀವು ನಿಮ್ಮ ಅಂಗನವಾಡಿ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಈ ಮಾಹಿತಿ ಪಡೆಯಬಹುದು. ಹಾಗೂ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಛೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. CDPO ಅಧಿಕಾರಿಗಳ ಬಳಿ ಆಯಾ ತಾಲೂಕು ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿನ ಫಲಾನುಭವಿಗಳ ಪಟ್ಟಿಯಿದ್ದು, ಆ ಮೂಲಕ ಮಾಹಿತಿ ಪಡೆಯಬಹುದು.
* ಇನ್ನೂ ಯೋಜನೆಯ ಹಣ ಬಾರದೇ ಇದ್ದವರು ನಿಮ್ಮ ರೇಷನ್ ಕಾರ್ಡ್ ಗೆ KYC ಅಪ್ಡೇಟ್ ಆಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಿ. ಆಗದೇ ಇದ್ದಲ್ಲಿ ಕೂಡಲೇ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗುವ ಮೂಲಕ KYC ಅಪ್ಡೇಟ್ ಮಾಡಿಸಿಕೊಳ್ಳಿ.ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿಕೊಂಡಿರುವ ಫಲಾನುಭವಿಗಳಲ್ಲಿ ಯಾರಿಗೆ ಮೊದಲ ಕಂತಿನ ಹಣ ಬಂದಿಲ್ಲ ಅಂತಹವರು ತಮ್ಮ ಬ್ಯಾಂಕ್ಗಳಲ್ಲಿ ಇ-ಕೆವೈಸಿ ಹಾಗೂ ಆಧಾರ್ ಜೋಡಣೆ ಮಾಡಿಕೊಂಡರೆ ಯೋಜನೆ ಹಣ ಜಮಾ ಆಗಲಿದೆ.
* ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ವಿವರದಲ್ಲಿ ಮಾಹಿತಿಗಳು ಹೊಂದಾಣಿಕೆ ಆಗಿರಬೇಕು, ಅಥವಾ ಹೆಸರುಗಳಲ್ಲಿ ಏನಾದರೂ ತಪ್ಪಾಗಿದ್ದರೆ ಬೇಗನೇ ಸರಿಪಡಿಸಿಕೊಳ್ಳಿ.ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎನ್ನುವುದನ್ನು ದೃಢಪಡಿಸಿಕೊಳ್ಳಿ. ಆಧಾರ್ ಲಿಂಕ್ ಮಾತ್ರವಲ್ಲ ಸೀಡಿಂಗ್ ಆಗಿ NPCI ಮ್ಯಾಪಿಂಗ್ ಕೂಡ ಆಗಿರಬೇಕು.
* ಗೊಂದಲದಲ್ಲಿರುವ ಮಹಿಳೆಯರು 8147500500 ಈ ಸಂಖ್ಯೆಗೆ ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ ಕಳುಹಿಸುವ ಮೂಲಕ ತಮ್ಮ ಅರ್ಜಿ ಸಲ್ಲಿಕೆ ಸ್ಥಿತಿ ಏನಾಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.