ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ದಿ ಬರುತ್ತಿದೆ. ಈಗ ಕಾನೂನು ತಜ್ಞರು, ರೈತರನ್ನು ಕರೆದು ಮಾತನಾಡಿಸುತ್ತಿದ್ದಾರೆ. ಈ ಕೆಲಸ ಮೊದಲೇ ಮಾಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕಿದಂತೆ ಈಗ ಕಾನೂನು ಹೋರಾಟ ಮಾಡಲು ಹೊರಟಿದ್ದಾರೆ. ಕಾನೂನು ತಜ್ಞರ ಜೊತೆ ಮಾತನಾಡುವ ಕೆಲಸವನ್ನು ಮೊದಲೇ ಮಾಡಬೇಕಿತ್ತು. ಈಗಲಾದರೂ ಸರ್ಕಾರ ಪ್ರಾಮಾಣಿಕವಾಗಿ ಕಾನೂನು ಹೋರಾಟ ಮಾಡಲಿ ಎಂದು ಹೇಳಿದರು.
ಗಡಿ, ನೆಲ ಜಲ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಮೂರ್ತಿ ಶಿವರಾಜ ಪಾಟಿಲ್ ಪರಿಣಿತರಿದ್ದಾರೆ ಅವರನ್ನು ಕರೆದು ಮಾತನಾಡಿಸಬೇಕಿತ್ತು. ಇನ್ನೂ ಅನೇಕ ಕಾನೂನು ತಜ್ಞರಿದ್ದಾರೆ ಎಲ್ಲರನ್ನೂ ಕರೆದು ಚರ್ಚಿಸಬೇಕಿತ್ತು. ಪ್ರಾಧಿಕಾರದ ಆದೇಶ ಬಂದ ಮೇಲೆ ಈಗ ಚರ್ಚಿಸುತ್ತಿದ್ದಾರೆ ಎಂದು ಗುಡುಗಿದರು.
ರಾಜ್ಯದಲ್ಲಿ ಬರಗಾಲ ಆರಂಭವಾಗಿದೆ. ಉತ್ತರ ಕರ್ನಾಟಕದ ನೂರಾರು ತಾಲೂಕುಗಳಲ್ಲಿ ಬರ ಇದೆ. ಬರದ ಪರಿಹಾರ ನೀಡದೇ ರಾಜ್ಯ ಸರ್ಕಾರದ ನಾಯಕರು ಕೇಂದ್ರದ ಕಡೆಗೆ ಬೆರಳು ತೋರಿಸುತ್ತಾರೆ. ಬರಗಾಲವಿರುವಾಗ ಇಂತಹ ಸರ್ಕಾರವಿರುವುದು ದುರಂತ ಎಂದರು.