ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ಸರ್ಕಾರದ ಕ್ರಮ ಖಂಡಿಸಿ ರಾಜ್ಯದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿರುವ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ, ನಿರ್ಲಕ್ಷ ಮಾಡದೇ ಸರ್ಕಾರ ರೈತರ ಪರ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಕೋರ್ಟ್ ನಿಂದ ಆದೇಶ ಹೊರಡಿಸಿದೆ. ಕಾವೇರಿ ಬೋರ್ಡ್ ಮಾಹಿತಿ ನೀಡಿರುವ ಪ್ರಕಾರಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡೋಕೆ ಹೇಳಿದೆ. ಇದರಿಂದ 7.5 ಟಿಎಂಸಿ ನೀರು ಖಾಲಿಯಾಗುತ್ತದೆ. ಮೊನ್ನೆ ದಿನ ಶ್ರೀರಂಗಪಟ್ಟಣದಲ್ಲಿ ನೀರು ಖಾಲಿಯಾಗಿರುವುದನ್ನು ನೋಡಿದ್ದೀವಿ ಎಂದರು.
ತಮಿಳುನಾಡಿಗೆ 1.80 ಸಾವಿರ ಹೆಕ್ಟೇರ್ ಗೆ ನೀರು ಹರಿಸಲು ಅನುಮತಿ ಇದೆ. ಆದ್ರೆ ಸರಿಸುಮಾರು 4 ಲಕ್ಷ ಹೆಕ್ಟೇರ್ ಗೆ ನೀರು ಹರಿಸಲಾಗುತ್ತಿದೆ. ಇದರ ಬಗ್ಗೆ ಯಾರೂ ಪ್ರಶ್ನೆ ಮಾಡ್ತಾ ಇಲ್ಲ. ಓರ್ವ ಯುವಕನಾಗಿ ಆಗ್ರಹ ಮಾಡುತ್ತಿದ್ದೇನೆ. ಸರ್ಕಾರ ನಿರ್ಲಕ್ಷ ಮಾಡದೇ ರೈತರ ಪರ ನಿಲ್ಲಬೇಕು ಎಂದು ಹೇಳಿದ್ದಾರೆ.