ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಕೃಷಿ ಉತ್ಪಾದನೆ ಶೇಕಡ 50ರಷ್ಟು ಕಡಿಮೆಯಾಗಿದೆ. ಬರದಿಂದ ಸುಮಾರು 28,000 ಕೋಟಿ ರೂ. ನಷ್ಟು ಬೆಳೆ ಹಾನಿಯಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಸಾಮಾನ್ಯವಾಗಿ 1.16 ಕೋಟಿ ಮೆಟ್ರಿಕ್ ಟನ್ ಕೃಷಿ ಉತ್ಪಾದನೆ ಆಗಬೇಕಿತ್ತು. ಆದರೆ ಈ ಬಾರಿ ಬರ ಪರಿಸ್ಥಿತಿ ಕಾರಣ 58 ಲಕ್ಷ ಮೆಟ್ರಿಕ್ ಟನ್ ಕೃಷಿ ಉತ್ಪಾದನೆ ನಷ್ಟವಾಗುವ ಸಾಧ್ಯತೆ ಇದೆ. ಅಕ್ಟೋಬರ್ ತಿಂಗಳಲ್ಲಿ ಕೃಷಿ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆ ಇದೆ. ಬರ ಪರಿಹಾರಕ್ಕೆ 4000 ಕೋಟಿ ರೂ. ನಿಡುವಂತೆ ರಾಜ್ಯದಿಂದ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕೃಷಿ ಉತ್ಪನ್ನ ನಷ್ಟವಾಗುವುದರಿಂದ ರಾಜ್ಯಕ್ಕೆ ಸಮಸ್ಯೆ ಆಗದು. ರಾಷ್ಟ್ರಮಟ್ಟದಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ. ರಾಜ್ಯದಲ್ಲಿ ಉತ್ತಮ ಮಳೆಯ ಲಕ್ಷಣಗಳು ಗೋಚರಿಸುತ್ತಿವೆ. ನೀರಿನ ಅಭಾವದ ಬಗ್ಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಭತ್ತ ಬೆಳೆಯದಂತೆ ತಿಳಿಸಿದ ನಂತರವೂ ಕೆಲವರು ಭತ್ತ ಬಿತ್ತನೆ ಮಾಡಿದ್ದು, ಬಿತ್ತಿದ್ದ ಬೆಳೆಗಳು ನಾಶವಾಗುವ ಸಾಧ್ಯತೆ ಇದೆ. 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.