ದಿನಸಿ ವಸ್ತುಗಳನ್ನು ಡೆಲಿವರಿ ಮಾಡುವ ಸ್ವಿಗ್ಗಿ ಏಜೆಂಟ್‌ಗಳು ಮುಂಬೈನಲ್ಲಿ ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಗಣೇಶ ಚತುರ್ಥಿ ದಿನದಂದು ತಮಗೆ ನಿಗದಿಗೊಳಿಸಿದ ಕರ್ತವ್ಯದ ನಡುವೆ ಗಣೇಶ ಚತುರ್ಥಿಯ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಸಾಮಾನ್ಯವಾಗಿ ಮುಂಬೈನಲ್ಲಿ ಗಣೇಶ ಚತುರ್ಥಿಯನ್ನು ಮಹಾ ಹಬ್ಬವನ್ನಾಗಿ ಆಚರಿಸಲಾಗುತ್ತೆ. ಇದೇ ಸಂದರ್ಭ ಗ್ರೋಸರಿ ಐಟಂಗಳನ್ನು ಡೆಲಿವರಿ ಮಾಡುವ ಸಂಸ್ಥೆಯಾದ ಸ್ವಿಗ್ಗಿ ತಮ್ಮ ಎಂದಿನ ಕರ್ತವ್ಯದ ಜೊತೆ ಜೊತೆಗೆ ವೃದ್ಧಾಶ್ರಮಗಳಲ್ಲಿರುವ ಹಿರಿಯ ನಾಗರಿಕರಲ್ಲಿ ಸಂತೋಷವನ್ನು ಹರಡುವುದಕ್ಕೆ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು.
ನಗರದಾದ್ಯಂತ ಇರುವ ಪ್ರಸಿದ್ದ ಗಣೇಶೋತ್ಸವ ಕಾರ್ಯಕ್ರಮದ ಸ್ಥಳಗಳಿಂದ ಸಂಗ್ರಹಿಸಿದ ನೂರಾರು ಪ್ರಸಾದ ಬಾಕ್ಸ್‌ಗಳನ್ನು ವೃದ್ಧಾಶ್ರಮದಲ್ಲಿರುವ ಹಿರಿಯ ನಾಗರಿಕರಿಗೆ ಪರ್ಸನಲ್ ಆಗಿ ಹೋಗಿ ಕೊಟ್ಟು ಬಂದರು.
ಈ ವಿಶಿಷ್ಟವಾದ ಕಾರ್ಯದಿಂದ ಗಣೇಶೋತ್ಸವ ನಡೆಯುತ್ತಿರುವ ಕಾರ್ಯಕ್ರಮದ ಸ್ಥಳಗಳಿಗೆ ಖುದ್ದು ಭೇಟಿ ನೀಡಲು ಸಾಧ್ಯವಾಗದ ಹಿರಿಯ ಜೀವಗಳಿಗೆ ಭಾಗವಹಿಸಿದಂತೆ ಮತ್ತು ಗಣಪತಿಯ ಆಶೀರ್ವಾದ ಪಡೆದ ಅನುಭವವನ್ನು ನೀಡಿತು.
ಇದರ ಜೊತೆ ಈ ಸ್ವಿಗ್ಗಿ ಡೆಲಿವರಿ ಏಜೆಂಟ್‌ಗಳು ಮುಂಬೈನಲ್ಲಿರುವ ರಿಯಲ್ ಹೀರೊಗಳಾದ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆಯು ಗಣೇಶೋತ್ಸವದ ಸಂಭ್ರಮವನ್ನು ಹಂಚಿಕೊಂಡರು. ಉತ್ಸವದ 7 ನೇ ದಿನದಂದು ಗಣೇಶೋತ್ಸವದ ಮೆರವಣಿಗೆಗಳನ್ನು ಮ್ಯಾನೇಜ್ ಮಾಡುತ್ತಿದ್ದ ಹಾಗೂ ಇದಕ್ಕಾಗಿಯೇ ಶ್ರಮಿಸುತ್ತಿದ್ದ ಟ್ರಾಫಿಕ್ ಅಧಿಕಾರಿಗಳ ಬದ್ಧತೆಯನ್ನು ಗುರುತಿಸಿ ಆ ಅಧಿಕಾರಿಗಳಿಗೆ ಪ್ರಸಾದವನ್ನು ನೀಡಿ ಸಂಭ್ರಮಿಸಿದರು.