ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬಹು ಮಂಜೂರಾತಿ ಮಾಡಿದ ಆರೋಪದಲ್ಲಿ ಇಬ್ಬರು ಗ್ರಾಮಲೆಕ್ಕಿಗರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇವರಿಬ್ಬರೂ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. 2019 ರಿಂದ 2021ರಲ್ಲಿ ಒಟ್ಟು 13 ಮಂದಿಗೆ ಅರ್ಜಿ ಇಲ್ಲದೇ, ಸಾಗುವಳಿ ಚೀಟಿಯೂ ಇಲ್ಲದೆ, ಬಗರ್ ಹುಕುಂ ಕಮಿಟಿಯಲ್ಲಿಡದೇ ಅಕ್ರಮವಾಗಿ ಭೂ ಮಂಜೂರಾತಿ ಮಾಡಲಾಗಿದೆ.
ಅಂದಿನ ತಹಶೀಲ್ದಾರ್ ರಮೇಶ್, ಶಿರಸ್ತೇದಾರ್ ಪಾಲಯ್ಯ, ಗ್ರಾಮ ಲೆಕ್ಕಿಗರಾದ ಗಿರೀಶ್ ಮತ್ತು ನೇತ್ರ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಉಪವಿಭಾಗಾಧಿಕಾರಿ ಹೆಚ್.ಡಿ. ರಾಜೇಶ್ ನಿರ್ದೇಶನಂದಂತೆ ಮೂಡಿಗೆರೆ ತಹಶೀಲ್ದಾರ್ ತಿಪ್ಪೇಸ್ವಾಮಿದೂರು ನೀಡಿದ್ದರು.
ಭಾನುವಾರ ಬಣಕಲ್ ನಲ್ಲಿ ಗಿರೀಶ್ ಅವರನ್ನು, ಮೂಡಿಗೆರೆಯ ಪಿಜಿಯಲ್ಲಿದ್ದ ನೇತ್ರ ಅವರನ್ನು ಬಂಧಿಸಲಾಗಿದೆ. ಗಿರೀಶ್ ಈ ಹಿಂದೆ ಅಕ್ರಮ ಭೂ ಮಂಜೂರಾತಿ ಆರೋಪದ ಮೇಲೆ ಅಮಾನತುಗೊಂಡಿದ್ದರು. ಮೂಡಿಗೆರೆ ತಹಶೀಲ್ದಾರ್ ಆಗಿದ್ದ ರಮೇಶ್ ಸ್ಥಳ ನಿರೀಕ್ಷಣೆಯಲ್ಲಿದ್ದು, ಶಿರಸ್ತೇದಾರರಾಗಿದ್ದ ಪಾಲಯ್ಯ ಹೊಸದುರ್ಗ ತಾಲ್ಲೂಕು ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.