ಬೆಂಗಳೂರು: ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯ ತಮ್ಮ ಕ್ಯಾಂಪಸ್ ನ ಎಲ್ಲ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಮತ್ತು ಸಂಯೋಜಿತ ಎಲ್ಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ ಮಾಡಿವೆ.
ಉನ್ನತ ಶಿಕ್ಷಣ ಇಲಾಖೆ ಆದೇಶದ ಮೇರೆಗೆ ಬೆಂಗಳೂರು ವಿವಿ ಮತ್ತು ಬೆಂಗಳೂರು ನಗರ ವಿವಿ ಕುಲಸಚಿವರು ರಜೆ ಘೋಷಣೆ ಮಾಡಿ ಸುತ್ತೋಲೆ ಹೊರಡಿಸಿದ್ದಾರೆ. ಯಾವುದೇ ಅಧ್ಯಯನ ವಿಭಾಗಗಳಲ್ಲಿ ತರಗತಿ ಚಟುವಟಿಕೆಗಳು ಸೆ. 26ರ ಮಂಗಳವಾರ ನಡೆಯುವುದಿಲ್ಲ. ಸಂಯೋಜಿತ ಕಾಲೇಜುಗಳು ಕೂಡ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ರಜೆ ಘೋಷಿಸುವಂತೆ ಸೂಚಿಸಲಾಗಿದೆ.
ಸೆ. 26ರಂದು ಬೆಂಗಳೂರು ವಿಶ್ವವಿದ್ಯಾಲಯ ನಡೆಸಲು ಉದ್ದೇಶಿದ್ದ ವಿವಿಧ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಎಲ್ಲಾ ಪರೀಕ್ಷೆಗಳನ್ನು ಸೆ. 27ರಂದು ನಡೆಸುವುದಾಗಿ ತಿಳಿಸಿದೆ.
ಬೆಂಗಳೂರು ನಗರ ವಿಶ್ವವಿದ್ಯಾಲಯ ಸೆ. 26ರಂದು ನಿಗದಿಯಾಗಿದ್ದ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ನ ವಿವಿಧ ಪದವಿ ಪರೀಕ್ಷೆಗಳನ್ನು ಮುಂದೂಡಿದ್ದು, ಅ. 3 ರಂದು ಪರೀಕ್ಷೆ ನಡೆಸುವುದಾಗಿ ತಿಳಿಸಿದೆ.