ಧಾರವಾಡ: ದೋಷಪೂರಿತ ವಸ್ತು ಪೂರೈಕೆ ಮಾಡಿದ್ದ ಫ್ಲಿಪ್ಕಾರ್ಟ್, ಸಿಐಜಿ. ಎಫ್ಐಎಲ್ ಲಿಮಿಟೆಡ್ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿ ಆದೇಶಿಸಿದೆ.
ಧಾರವಾಡದ ಖಾನಾಪೂರ ಮ. ತಡಕೋಡ ಗ್ರಾಮದ ವಾಸಿ ಈರಣ್ಣ ಗುಂಡಗೋವಿ ಎಂಬುವವರು ಫ್ಲಿಪ್ ಕಾರ್ಟ್ ಕಂಪನಿಯಿಂದ ಆನ್ಲೈನ್ ಮೂಲಕ 2,632 ರೂ. ಸಂದಾಯ ಮಾಡಿ ಮಿಲ್ಟನ್ ಬೆವರೇಜ್ ಡಿಸ್ಪೆನ್ಸರ್ 2500 ಎಂಎಲ್ ನ ಥರ್ಮಸ್ ಆರ್ಡರ್ ಮಾಡಿದ್ದರು.
ಅದರಂತೆ ಸದರಿ ಥರ್ಮಸ್ ಅನ್ನು 1ನೇ ಎದುರುದಾರರ ಕೋರಿಯರ್ ಸರ್ವಿಸ್ನವರು ದೂರುದಾರರಿಗೆ ತಲುಪಿಸಿದ್ದರು. ದೂರುದಾರ ಆ ಥರ್ಮಸ್ನ ಬಳಸಲು ತೆರೆದು ನೋಡಿದಾಗ ಅದು ದೋಷದಿಂದ ಕೂಡಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಅದನ್ನು ವಾಪಸ್ಸು ಕಳುಹಿಸಲು 1ನೇ ಎದುರುದಾರರಿಗೆ ದೂರುದಾರ ವಿನಂತಿಸಿಕೊಂಡಿರುತ್ತಾರೆ. ಅದರಂತೆ ಕಂಪನಿಯ ಕೋರಿಯರ್ ಸರ್ವಿಸ್ ನವರು ಆ ಥರ್ಮಸ್ ಅನ್ನು ದೂರುದಾರನಿಂದ ಹಿಂಪಡೆದುಕೊಂಡು ಹೋಗಿರುತ್ತಾರೆ.
ಆದರೆ, ಆ ದೋಷಯುಕ್ತ ಥರ್ಮಸ್ ಬದಲು ಬೇರೆ ಹೊಸ ಥರ್ಮಸ್ ಕೊಡದೇ ಅದರ ಬೆಲೆ 2,632 ರೂ. ಹಿಂದಿರುಗಿಸದೇ ಥರ್ಮಸ್/ವಸ್ತುವನ್ನು ಮರಳಿ ಪಡೆಯುವಿಕೆ ರದ್ದುಗೊಳಿಸಲಾಗಿರುತ್ತದೆ ಎಂದು ದೂರುದಾರನ ಮೂಬೈಲ್ ಗೆ 1ನೇ ಎದುರುದಾರರು ಸಂದೇಶ ಕಳುಹಿಸಿರುತ್ತಾರೆ.
ಎದುರುದಾರ ನಂ.1 ಮತ್ತು 2ನೇ ರವರ ಇಂತಹ ನಡವಳಿಕೆಯಿಂದ ತನಗೆ ಸೇವಾ ನ್ಯೂನ್ಯತೆ ಎಸಗಿ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ಹೇಳಿ ಅವರ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಅ. ಬೋಳಶೆಟ್ಟಿ ಮತ್ತು ಪ್ರಭು ಸಿ. ಹಿರೇಮಠ ಅವರು ದೋಷಯುಕ್ತ ಮಿಲ್ಟನ್ ಬೆವರೇಜ್ ಡಿಸ್ಪನ್ಸರ್ ಥರ್ಮಸ್ ಹಿಂಪಡೆದು ಬೇರೆ ಹೊಸ ಥರ್ಮಸ್ ಮರಳಿಸುವಲ್ಲಿ ಎದುರುದಾರರು. ವಿಫಲರಾಗಿ ದೂರುದಾರನಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಎದುರುದಾರರು ದೂರುದಾರರಿಗೆ ಥರ್ಮಸ್ ಮೌಲ್ಯ 2,632 ರೂ.ಗಳನ್ನು ಈ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಕೊಡಲು ಆದೇಶಿಸಿದೆ. ಅಲ್ಲದೇ, ದೂರುದಾರನಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ 10,000 ರೂ. ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಎಂದು 5,000 ರೂ.ಗಳನ್ನು ನೀಡುವಂತೆ ಇಬ್ಬರೂ ಎದುರುದಾರರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.