ಧಾರವಾಡ : ನೌಕರರು ಸಂಸ್ಥೆಯ ಸೇವೆಯಲ್ಲಿದ್ದಾಗ ಕರ್ತವ್ಯ ನಿರತ, ಖಾಸಗಿ ಅಪಘಾತದಿಂದ ಮೃತಪಟ್ಟಲ್ಲಿ ಮತ್ತು ಅಂಗನ್ಯೂನತೆಗಳಿಗೆ ಒಳಗಾದಲ್ಲಿ ಅವರ ಅವಲಂಬಿತರಿಗೆ, ನೌಕರರಿಗೆ ಗರಿಷ್ಠ ಮೊತ್ತದ ಆರ್ಥಿಕ ಸೌಲಭ್ಯ ಸಿಗುವ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರವರೊಂದಿಗೆ ನೌಕರರಿಗೆ ಸಿ.ಎಸ್.ಪಿ ಯೋಜನೆಯಡಿ ಅಪಘಾತ ವಿಮಾ ಸೌಲಭ್ಯವನ್ನು ಎಸ್.ಬಿ.ಐ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡು, ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಸತ್ತೂರಿನ ಡಾ.ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ರಜತ ಮಹೋತ್ಸವ ಸಂಭ್ರಮ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಪ್ರಶಸ್ತಿ, ಪದಕವಿತರಿಸಿ, ಸ್ಮರಣ ಸಂಚಿಕೆ ಬಿಡುಗಡೆ ಮಾಡಿ, ಮಾತನಾಡಿದರು. ನೌಕರರು ಅಪಘಾತದಲ್ಲಿ ಮೃತಪಟ್ಟಿಲ್ಲಿ ಅವರ ಅವಲಂಬಿತರಿಗೆ ಗರಿಷ್ಠ ರೂ, 50 ಲಕ್ಷ ಮೊತ್ತವನ್ನು ಪಾವತಿಸಲಾಗುತ್ತದೆ.
ಈ ಯೋಜನೆಯು ಜಾರಿಗೆ ಬಂದಾಗಿನಿಂದ ಸಂಸ್ಥೆಯಲ್ಲಿ 3 ಜನ ನೌಕರರು ಅಪಘಾತದಲ್ಲಿ ಮೃತಪಟ್ಟಿರುತ್ತಾರೆ. ಮೃತಪಟ್ಟ ನೌಕರರ ಪೈಕಿ ದಿ|| ಎನ್ ಎಸ್ ಯಕ್ಕನ್ನವರ, ಚಾ/ನಿ, ಬೆಳಗಾವಿ ವಿಭಾಗ ಇವರ ಅವಲಂಬಿತರಿಗೆ ಅಪಘಾತ ವಿಮಾ ರೂ,50 ಲಕ್ಷ ಗಳ ಮೊತ್ತವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರವರು ಅವರ ಖಾತೆಗೆ ಜಮಾ ಮಾಡಿರುತ್ತಾರೆ.