ಬೆಂಗಳೂರು: ಚುನಾವಣೆಗೂ ಮುನ್ನ ಉಚಿತಗಳ ಘೋಷಣೆ ಮಾಡಿದ್ದ ಕಾಂಗ್ರೆಸ್ ಈಗ ತಮಿಳುನಾಡು ಸಿಎಂ ಸ್ಟಾಲಿನ್ ಗೂ ನೀರು ಫ್ರೀ ಎಂದಿದೆ ಎಂದು ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಉಚಿತ ಘೋಷಣೆ ಮಾಡಿದರು. ಮಹದೇವಪ್ಪ ನಿನಗೂ ಫ್ರೀ, ಕಾಕಾಪಾಟೀಲ್ ನಿನಗೂ ಫ್ರೀ ಅಂತ ಹೇಳಿದ್ದರು. ಈಗ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಗೂ ನೀರು ಫ್ರೀ ಎಂದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ತಮಿಳುನಾಡು ತಮ್ಮ ರೈತರ ಬೆಳೆಗಳಿಗೆ ನೀರು ಕೇಳುತ್ತಿದ್ದಾರೆ. ಆದರೆ ನಮಗೆ ಇಲ್ಲಿ ಕುಡಿಯಲು ನೀರಿಲ್ಲ. ಸೆ.26ರಂದು ಕರೆ ನೀಡಿರುವ ಬೆಂಗಳೂರು ಬಂದ್ ಗೆ ಬಿಜೆಪಿ ಬೆಂಬಲವಿದೆ. ಬಂದ್ ಬೆಂಬಲಿಸುವಂತೆ ಬಿಜೆಪಿ ಕಾರ್ಯಕರ್ತರಿಗೂ ಸೂಚಿಸಲಾಗಿದೆ ಎಂದರು.
ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿದ್ದು ನೀವೇ ಅಲ್ವಾ? ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಕೇಳುತ್ತೇನೆ ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿ ಈಗ ತಮಿಳುನಾಡಿಗೆ ಯಾಕೆ ನೀರು ಬಿಟ್ಟಿದ್ದೀರಿ? ಎಲ್ಲಿದೆ ನಮ್ಮ ಹಕ್ಕು? ಎಂದು ಪ್ರಶ್ನಿಸಿದರು.