ಬೆಂಗಳೂರು : ಸೆ.29 ರಂದು ಅಖಂಡ ‘ಕರ್ನಾಟಕ ಬಂದ್’ ಮಾಡುವುದಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಣೆ ಮಾಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಸೆ.29 ರಂದು ಅಖಂಡ ‘ಕರ್ನಾಟಕ ಬಂದ್’ ಮಾಡುತ್ತೇವೆ, ಈ ಬಗ್ಗೆ ನಾಳೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ವಾಟಾಳ್ ನಾಗರಾಜ್ ಹೇಳಿದ್ದಾರೆ. ನಾಳೆ ಮತ್ತೊಂದು ಸುತ್ತಿನ ಸಭೆ ನಡೆಸಿ ಸಭೆಯಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ನಿನ್ನೆಯಿಂದ ಕಾವೇರಿ ಕಿಚ್ಚು ಜೋರಾಗಿದ್ದು. ಕರ್ನಾಟಕದ ರೈತರು ವಿಶೇಷವಾಗಿ ಮಂಡ್ಯ, ಚಾಮರಾಜನಗರ, ಮೈಸೂರು ಮತ್ತು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೈಸೂರಿನ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕನ್ನಡ ರೈತ ಸಂಘಟನೆ ಸೆ.26 ರಂದು ಬೆಂಗಳೂರು ಬಂದ್ ಗೆ ಕರೆ ನೀಡಿದೆ.
ಇನ್ನೂ, ಬೆಂಗಳೂರು ಬಂದ್ ಬಿಜೆಪಿಯೂ ಬೆಂಬಲ ಸೂಚಿಸಿದೆ. ಈ ಬಂದ್ ಗೆ ಕನ್ನಡಿಗರು ಸಂಪೂರ್ಣ ಬೆಂಬಲ ನೀಡಬೇಕೆಂದು ಬಿಜೆಪಿ ನಾಯಕರು ಹೇಳಿದ್ದಾರೆ. ಕಾವೇರಿ ಜಲ ವಿವಾದವು ರಾಜಕೀಯವನ್ನು ಮೀರಿದೆ ಎಂದು ಬಿಜೆಪಿ ತಿಳಿಸಿದೆ.
ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರು ಬಂದ್ಗೆ ವಿವಿಧ ಸಂಘಟನೆಗಳಿಂದ ಸಹಕಾರ ಕೋರಿದ್ದಾರೆ. ಶಾಲಾ-ಕಾಲೇಜುಗಳಿಗೆ, ಫಿಲಂ ಚೇಂಬರ್ ಮತ್ತು ಐಟಿ ಕಂಪನಿಗಳಿಗೆ ರಜೆ ಘೋಷಿಸುವಂತೆ ಶಾಂತಕುಮಾರ್ ಮನವಿ ಮಾಡಿದ್ದಾರೆ. ಈ ಕುರಿತು ಚರ್ಚಿಸಲು ವಿಶೇಷ ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.