ಬೆಂಗಳೂರು: ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್(HSRP) ಅಳವಡಿಸುವ ಸಂಬಂಧ ಹೊರಡಿಸಿದ ಅಧಿಸೂಚನೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ. 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾಗಿರುವ ವಾಹನಗಳಿಗೆ ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇದಕ್ಕೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಈ ಆದೇಶಕ್ಕೆ ತಡೆ ನೀಡುವಂತೆ ಕೋರಿ ಹಲವು ಸಂಸ್ಥೆಗಳು ತಕಾರರು ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ಪೀಠ ವಿಚಾರಣೆ ನಡೆಸಿ ಸರ್ಕಾರದ ಅಧಿಸೂಚನೆಗೆ ತಡೆ ನೀಡಲು ನಿರಾಕರಿಸಿದೆ.
ರಾಜ್ಯ ಸರ್ಕಾರ 2023ರ ಆಗಸ್ಟ್ 17ರಂದು ಅಧಿಸೂಚನೆ ಹೊರಡಿಸಿ 2019ರ ಏಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಣಿಯಾದ ವಾಹನಗಳು 90 ದಿನಗಳ ಒಳಗೆ ಹೊಸ ಪರವಾನಿಗೆ ನೋಂದಣಿ ಫಲಕ ಅಳವಡಿಸಬೇಕು ಎಂದು ತಿಳಿಸಿದೆ.
ಇದರಿಂದ ಪ್ರತಿ ಪರವಾನಿಗೆ HSRP ತಯಾರಿಕರಿಗೆ ಅನುಮೋದನೆ ನೀಡಲು ಅನುಸರಿಸಬೇಕಾದ ಪ್ರಕ್ರಿಯೆ ಅಂತಿಮಗೊಳಿಸಿ ಪ್ರಕಟಿಸಬೇಕು. ಕೋರ್ಟ್ ಮೆಟ್ಟಿಲೇರಿದ ಎಲ್ಲಾ ಅರ್ಜಿದಾರರು HSRP ಜಾರಿಯಲ್ಲಿ ಪಾಲ್ಗೊಳ್ಳಲು ವಾಹನ ಉತ್ಪಾದಕರ ಒಪ್ಪಿಗೆಯೊಂದಿಗೆ ಅವಕಾಶ ಕಲ್ಪಿಸಬೇಕು. ಇದು ಅರ್ಜಿ ಕುರಿತ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಉತ್ಪಾದಕರಿಗೆ ಒಪ್ಪಿಗೆ ನೀಡುವ ನಿಟ್ಟಿನಲ್ಲಿ ವಾಹನ ತಯಾರಕರಿಗೆ ಕಾಲಮಿತಿ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.