
ಬೆಂಗಳೂರು: 2 ಲಕ್ಷ ಅಕ್ರಮ ಕೃಷಿ ಪಂಪ್ಸೆಟ್ ಗಳನ್ನು ಸಕ್ರಮಗೊಳಿಸಲು ತೀರ್ಮಾನಿಸಲಾಗಿದೆ. 6099 ಕೋಟಿ ರೂ. ವೆಚ್ಚದಲ್ಲಿ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ತೀರ್ಮಾನಿಸಲಾಗಿದೆ.
2015ರಿಂದ ಈಚಿನ ಪಂಪ್ಸೆಟ್ ಗಳಿಗೆ ಅಕ್ರಮವಾಗಿ ಅಳವಡಿಸಿರುವ ಸುಮಾರು ಎರಡು ಲಕ್ಷ ಕೃಷಿ ಪಂಸೆಟ್ ಗಳ ವಿದ್ಯುತ್ ಸಂಪರ್ಕ ಸಕ್ರಮಗೊಳಿಸಲಾಗುವುದು. ರೈತರು ಅಕ್ರಮವಾಗಿ ಅಳವಡಿಕೆ ಮಾಡಿರುವ ಕೃಷಿ ಪಂಪ್ ಸೆಟ್ ವಿದ್ಯುತ್ ಸಂಪರ್ಕಗಳನ್ನು ಸಕ್ರಮಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸೆಪ್ಟೆಂಬರ್ 22ರ ನಂತರ ಅಕ್ರಮವಾಗಿ ಪಡೆಯುವ ಕೃಷಿ ಪಂಪ್ ಸೆಟ್ ವಿದ್ಯುತ್ ಸಂಪರ್ಕಗಳಿಗೆ ಇದು ಅನ್ವಯವಾಗುವುದಿಲ್ಲ. ಈಗಾಗಲೇ ಸಂಪರ್ಕ ಪಡೆದುಕೊಂಡು ಸಕ್ರಮಕ್ಕೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಅನ್ವಯವಾಗುತ್ತದೆ.
ವಿದ್ಯುತ್ ಮಾರ್ಗದಿಂದ 500 ಮೀಟರ್ ದೂರದಲ್ಲಿರುವ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ನೀಡುವ ಬದಲು ಸ್ಟ್ಯಾಂಡ್ ಅಲೋನ್ ಸೋಲಾರ್ ಘಟಕ ಅಳವಡಿಸುವ ಕುಸುಮ್ -ಬಿ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ್ದು, ಘಟಕ ವೆಚ್ಚದ ಶೇಕಡ 50ರಷ್ಟು ರಾಜ್ಯ ಸರ್ಕಾರ, ಶೇಕಡ 20ರಷ್ಟು ಫಲಾನುಭವಿ, ಶೇಕಡ 30ರಷ್ಟು ಕೇಂದ್ರ ಸರ್ಕಾರದಿಂದ ಭರಿಸಲಾಗುವುದು. ಸೋಲಾರ್ ನಿಂದ ವಿದ್ಯುತ್ ಪಡೆದು ಕೃಷಿ ಪಂಪ್ಸೆಟ್ ನಡೆಸಬಹುದಾಗಿದೆ ಎಂದು ಹೇಳಲಾಗಿದೆ.