ಬೆಂಗಳೂರು: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿರುವ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಸಮರ್ಪಕವಾಗಿ ವಾದ ಮಂಡಿಸಲು ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿ, ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಯಾರನ್ನು ವಕೀಲರನ್ನಾಗಿ ಮಾಡಿದ್ದರೋ ಈಗಲೂ ಅವರೇ ವಾದ ಮಂಡಿಸಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಮ್ಮ ವಕೀಲರು ಸಮರ್ಥವಾಗಿಯೇ ವಾದ ಮಂಡನೆ ಮಾಡಿದ್ದಾರೆ. ವಿಪಕ್ಷಗಳು ರಾಜಕೀಯಕ್ಕಾಗಿ ಆರೋಪಿಸುತ್ತಿದ್ದಾರೆ. ಬಸವರಾಜ್ ಬೊಮ್ಮಾಯಿಯವರು, ಹೆಚ್.ಡಿ.ಕೆಯವರು ಯಾವ ವಕೀಲರನ್ನು ಇಟ್ಟಿದ್ದರೋ ಈಗಲೂ ಅವರೇ ಇದ್ದಾರೆ. ಸಮರ್ಪಕವಾಗಿಯೇ ವಾದ ಮಾಂಡಿಸಿದ್ದಾರೆ. ರಾಜ್ಯದ ರೈತರ ಹಿತರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ವಿಪಕ್ಷಗಳು ಏನುಬೇಕಾದರೂ ಮಾತನಾಡಲಿ ಎಂದರು.
ಮಂಡ್ಯ ಬಂದ್ ನಿಂದ ಪ್ರಯೋಜನವಿಲ್ಲ. ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾದರೆ ಕಷ್ಟವಾಗುತ್ತೆ. ವಿಚಾರ ಕೋರ್ಟ್ ನಲ್ಲಿದೆ. ನಾವೂ ರೈತರ ಪರವಾಗಿಯೇ ಹೋರಾಡುತ್ತಿದ್ದೇವೆ. ಪ್ರತಿಭಟನೆ, ಹೋರಾಟ ಮಾಡಿಕೊಳ್ಳಲಿ ಆದರೆ ಬಂದ್ ಕೈ ಬಿಡಿ. ಇದರಿಂದ ಜನರಿಗೆ ಸಮಸ್ಯೆಯಾಗುತ್ತದೆ ಎಂದರು.
ಇದೇ ವೇಳೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಹೆಚ್.ಡಿ.ಕುಮಾರಸ್ವಾಮಿ, ವಿರುದ್ಧವೂ ಕಿಡಿ ಕಾರಿದ ಡಿಸಿಎಂ, ನಾನು ಹಿಂದೆ ದೇವಸ್ಥಾನಕ್ಕೆ ಹೋದಾಗ ಗೇಲಿ ಮಾಡಿದ್ದರು. ಆದರೆ ಅವರು ಹೋಮ-ಹವನ ಮಾಡಿಸಿದರು. ಈ ಬಗ್ಗೆ ಮಾತನಾಡಲ್ಲ. ಬೊಮ್ಮಾಯಿ ಅವರಿಗೂ ನಿಂತಲ್ಲಿಂದಲೇ ಉತ್ತರ ಕೊಡುವುದು ಗೊತ್ತಿದೆ. ಎಲ್ಲರಿಗೂ ಉತ್ತರ ನೀಡುವ ಶಕ್ತಿ ನನಗಿದೆ ಎಂದು ತಿರುಗೇಟು ನೀಡಿದರು.
ಮೇಕೆದಾಟುಗಾಗಿ ನಾವು ಪಾದಯಾತ್ರೆಯನ್ನೇ ಮಾಡಿದೆವು ಅಂದು ಎಲ್ಲರೂ ಎಲ್ಲಿಗೆ ಹೋಗಿದ್ದರು? ಇಂದು ಸ್ವಾಮೀಜಿಗಳು ಬಂದಿದ್ದಾರೆ, ಕನ್ನಡಪರ ಸಂಘಟನೆಗಳಿಗೆ ರೋಷ ಬಂದಿದೆ ಎಂದು ಹೇಳಿದರು.