ಬೆಂಗಳೂರು: ತಮಿಳುನಾಡಿಗೆ ಮತ್ತೆ 15 ದಿನಗಳ ಕಾಲ 5000 ಕ್ಯೂಸೆಕ್ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ,ರವಿ, ಕಾವೇರಿ ನದಿ ನೀರು ವಿಚಾರವಾಗಿ ನಾವು ರಾಜಕೀಯ ಮಾಡುತ್ತಿಲ್ಲ, ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ತಪ್ಪನ್ನು ಎತ್ತಿ ಹೇಳಲೇಬೇಕಾದ ಅನಿವಾರ್ಯತೆ ಇದೆ. ಕಾವೇರಿ ನದಿ ವಿಚಾರ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಮಳೆ ಕೊರತೆಯಿಂದ ಈಗಾಗಲೇ ಕೆ ಆರ್ ಎಸ್, ಕಬಿನಿ ಸೇರಿದಂತೆ ಜಲಾಶಯಗಳಲ್ಲಿ ನೀರಿಲ್ಲ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವೂ ನಮ್ಮ ರಕ್ಷಣೆಗೆ ಬಂದಿಲ್ಲ, ಈಗ ಸುಪ್ರೀಂಕೋರ್ಟ್ ಕೂಡ ನಮ್ಮ ರಕ್ಷಣೆಗೆ ಬಂದಿಲ್ಲ. ಸುಪ್ರೀಂಕೋರ್ಟ್ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ತಮಿಳುನಾಡು ಕೇಳುವುದಕ್ಕಿಂತ ಮೊದಲೇ ಕರ್ನಾಟಕ ನೀರು ಬಿಟ್ಟಿದೆ. ತಮಿಳುನಾಡಿಗೆ ಯಾರ ಭಯದಿಂದ ರಾಜ್ಯ ಸರ್ಕಾರ ನೀರು ಬಿಟ್ಟಿದೆ? ರಾಜ್ಯ ಸರ್ಕಾರಕ್ಕೆ ಡಿಎಂಕೆ ಬೆದರಿಕೆ ಹಾಕಿರಬಹುದು. ನಿಮ್ಮ ‘ಇಂಡಿಯಾ’ದ ಭಾಗ ಆಗಬೇಕು ಎಂದರೆ ನೀರು ಬಿಡಿ ಎಂದು… ಅಥವಾ ಕಾಂಗ್ರೆಸ್ ಹೈಕಮಾಂಡ್ ನೀರು ಬಿಡಲು ಸೂಚಿಸಿರಬಹುದು ಎಂದು ಕಿಡಿಕಾರಿದ್ದಾರೆ.