ಒಂದೇ ದಿನ ಎರಡು ಪರೀಕ್ಷೆಗಳು ನಿಗದಿಯಾಗಿದ್ದು ಅಭ್ಯರ್ಥಿಗಳಲ್ಲಿ ಗೊಂದಲ ಉಂಟಾಗಿದೆ. ಒಂದು ಉನ್ನತ ಶಿಕ್ಷಣದ ಪರೀಕ್ಷೆಯಾದರೆ, ಮತ್ತೊಂದು ಉದ್ಯೋಗದ ನೇಮಕಾತಿ ಪರೀಕ್ಷೆಯಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪಿಜಿ ಸಿಇಟಿ ಮತ್ತು ಕೇಂದ್ರೀಯ ವಿಶ್ವವಿದ್ಯಾಲಯದ ಹುದ್ದೆಯೊಂದರ ನೇಮಕಾತಿ ಪರೀಕ್ಷೆ ಸೆಪ್ಟೆಂಬರ್ 24ರಂದು ಮಧ್ಯಾಹ್ನ ಒಂದೇ ಸಮಯಕ್ಕೆ ನಿಗದಿಯಾಗಿದ್ದು, ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸಿದೆ.
ಉನ್ನತ ಶಿಕ್ಷಣ ಮುಂದುವರೆಸಬೇಕೇ ಅಥವಾ ನೌಕರಿ ಪಡೆಯಲು ಪರೀಕ್ಷೆ ಬರೆಯಬೇಕೆ ಎಂಬ ಬಗ್ಗೆ ಅಭ್ಯರ್ಥಿಗಳಲ್ಲಿ ಗೊಂದಲ ಉಂಟಾಗಿದೆ. ಸೆಪ್ಟೆಂಬರ್ 24ರಂದು ಮಧ್ಯಾಹ್ನ 2:30 ರಿಂದ ಸಂಜೆ 4:30ರ ವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸ್ನಾತಕೋತ್ತರ ಪದವಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಪ್ರವೇಶ ಪತ್ರ ನೀಡಲಾಗಿದೆ.
ಅದೇ ದಿನ ಅದೇ ಸಮಯಕ್ಕೆ ಕಲಬುರಗಿ ಜಿಲ್ಲೆಯ ಕಡಗಂಚಿಯ ಕೇಂದ್ರೀಯ ವಿಶ್ವವಿದ್ಯಾಲಯದ ಲೋವರ್ ಡಿವಿಜನ್ ಕ್ಲರ್ಕ್ ಹುದ್ದೆಗೆ ಲಿಖಿತ ಪರೀಕ್ಷೆ ನಿಗದಿಯಾಗಿದೆ. ಅಂದು ಮಧ್ಯಾಹ್ನ 2:30 ರಿಂದ 4:30ರ ವರೆಗೆ ಪರೀಕ್ಷೆ ನಡೆಯಲಿದೆ. ಎಂಸಿಎ ಪ್ರವೇಶಕ್ಕೆ ಅದೇ ದಿನ ಬೆಳಿಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪರೀಕ್ಷೆ ನಡೆಸಲಾಗುವುದು.
ದೂರದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದು ವಾಪಸ್ ಕೇಂದ್ರೀಯ ವಿವಿಗೆ ಹೋಗುವುದು ಎನ್ನುವ ಚಿಂತೆ ಅಭ್ಯರ್ಥಿಗಳಲ್ಲಿದೆ. ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಇವೆರಡರಲ್ಲಿ ಒಂದು ಪರೀಕ್ಷೆ ತೆಗೆದುಕೊಳ್ಳಬಹುದು. ಯಾವ ಪರೀಕ್ಷೆಗೆ ಹಾಜರಾಗಬೇಕೆಂಬ ಗೊಂದಲ ಉಂಟಾಗಿದೆ ಎಂದು ಹೇಳಲಾಗಿದೆ.