ಮೈಸೂರು: ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ ಉದ್ಯಮಿಗೆ 5 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಎಂ.ಲಕ್ಷ್ಮಣ್, ಚೈತ್ರಾ ಕುಂದಾಪುರ ಹಾಗೂ ಗುಂಪಿನ ಹಿಂದೆ ಇರುವವರು ಯಾರು? ಎಷ್ಟು ಹಣ ವಂಚಿಸಿದ್ದಾರೆ. ಎಷ್ಟು ಜನರಿಗೆ ವಂಚಿಸಿದ್ದಾರೆ ಎಂಬುದನ್ನು ಪೊಲೀಸರು ಇನ್ನೆರಡು ದಿನಗಳಲ್ಲಿ ತಿಳಿಸುತ್ತಾರೆ. ಒಟ್ಟು 17ಕ್ಕೂ ಹೆಚ್ಚು ಜನರು ಮೋಸ ಹೋಗಿದ್ದಾರೆ ಎಂದರು.
23 ಜನರಿಗೆ ಟಿಕೆಟ್ ಕೊಡಿಸಿ ಅವರಿಂದ ಹಣ ಪಡೆದಿದ್ದಾರೆ. 40 ಜನರು ಟಿಕೆಟ್ ಪಡೆಯುವ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. 185 ಕೋಟಿಯ ವ್ಯವಹಾರ ಇಲ್ಲಿ ಆಗಿದೆ ಎಂದು ಆರೋಪಿಸಿದರು.
9 ಜನರ ತಂಡದಿಂದ ಮೋಸವೆಸಗಲಾಗಿದೆ. ಇವರೆಲ್ಲರೂ ಬಿಜೆಪಿ ಹಾಗೂ ಆರ್.ಎಸ್.ಎಸ್ ಕಾರ್ಯಕರ್ತರು. ಚೈತ್ರಾ ಕುಂದಾಪುರ ಪಿಎಸ್ ಐ ಸೇರಿದಂತೆ ನಾಲ್ಕಕ್ಕೂ ಹೆಚ್ಚು ಹಗರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಅರಗ ಜ್ಞಾನೇಂದ್ರ ಅವರ ಜೊತೆ ಚೈತ್ರಾ ಕುಂದಾಪುರಳಿಗೆ ನೇರ ಸಂಪರ್ಕವಿದೆ. ಜೈಲಿನಲ್ಲಿರುವವರ ಕೆಲ ಸಂಪರ್ಕವೂ ಆಕೆಗಿದೆ ಎಂದು ಹೇಳಿದ್ದಾರೆ.