ಬೆಂಗಳೂರು : ಆಸ್ತಿ ಖರೀದಿ, ಮಾರಾಟಗಾರರಿಗೆ ಶಾಕ್ ಎದುರಾಗಿದ್ದು, ಅ.1 ರಿಂದ ಆಸ್ತಿ ನೋಂದಣಿ ಮಾರ್ಗಸೂಚಿ ದರ ಶೇ.30 ರಷ್ಟು ಹೆಚ್ಚಳವಾಗಲಿದೆ.
ಈ ಬಗ್ಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಕಂದಾಯ ಇಲಾಖೆಯ ನಿಯಮಾವಳಿ ಪ್ರಕಾರ ಪ್ರತಿವರ್ಷ ಆಸ್ತಿ ನೋಂದಣಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಬೇಕು ಎಂದು ಇದೆ. ಆದರೆ, ಹಲವು ವರ್ಷಗಳಿಂದ ದರ ಏರಿಕೆ ಮಾಡಿರಲಿಲ್ಲ. ಹಾಗಾಗಿ ಅ.1 ರಿಂದ ಮಾರ್ಗಸೂಚಿ ದರ ಹೆಚ್ಚಳ ಮಾಡಲಿದ್ದೇವೆ ಎಂದರು. ಇನ್ನು ರಾಜ್ಯದಲ್ಲಿ ಮಾರ್ಗಸೂಚಿ ದರ ಏರಿಕೆಯಾದರೆ ವರ್ಷಕ್ಕೆ 2000 ಕೋಟಿ ರೂ ಆದಾಯ ಬರುತ್ತೆ ಎಂದು ಹೇಳಿದರು.
ರಾಜ್ಯದಲ್ಲಿ ಎಲ್ಲಾ ಕಡೆ ಮಾರ್ಗಸೂಚಿ ದರ ಏರಿಕೆ ಆಗಲ್ಲ. ಕೆಲವು ಕಡೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಳ ಇದ್ದರೆ, ಅಂತಹ ಪ್ರದೇಶಗಳಲ್ಲಿ ದರ ಹೆಚ್ಚಳವಾಗುವುದಿಲ್ಲ ಎಂದರು. ಈ ಬಗ್ಗೆ ಆಕ್ಷೇಪ ಸಲ್ಲಿಸಲು ಅವಕಾಶ ಇದೆ. ಆಕ್ಷೇಪ ಗಮನಿಸಿ ಅಧಿಸೂಚನೆ ನಂತರ ಪ್ರಕಟ ಆಗಲಿದೆ ಎಂದು ಹೇಳಿದರು.