ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್ ಎದುರಾಗಿದ್ದು, ತಮಿಳುನಾಡಿಗೆ ಮತ್ತೆ 5 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಕರ್ನಾಟಕಕ್ಕೆ ಆದೇಶ ಹೊರಡಿಸಿದೆ.
ನವದೆಹಲಿಯ CWMA ಕಚೇರಿಯಲ್ಲಿ ಇಂದು ನಡೆದ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸಭೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಹಲವು ಚರ್ಚೆಗಳು ನಡೆದ ನಂತರ ತಮಿಳುನಾಡಿಗೆ ಮತ್ತೆ 5 ಸಾವಿರ ಕ್ಯೂಸೆಕ್ ನೀರು ಬಿಡಲು ಕರ್ನಾಟಕ ಸರ್ಕಾರಕ್ಕೆ CWMA ಆದೇಶ ನೀಡಿದೆ. ಸೆಪ್ಟೆಂಬರ್ 12 ರ ಆದೇಶವನ್ನೇ ಪಾಲಿಸುವಂತೆ ಸೂಚನೆ ನೀಡಲಾಗಿದೆ.
ಸೆಪ್ಟೆಂಬರ್ 12ರ ಆದೇಶದಂತೆ 15 ದಿನ ನೀರು ಹರಿಸುವಂತೆ ಆದೇಶಿಸಿದೆ. ಕೇವಲ 3 ಸಾವಿರ ಕ್ಯೂಸೆಕ್ ನೀರು ಬಿಡುವುದರಿಂದ ಭತ್ತದ ಬೆಳೆ ಹಾಳಾಗುತ್ತವೆ ಅದರಿಂದ ಹೆಚ್ಚುವರಿ ನೀರು ಬಿಡುವಂತೆ ತಮಿಳುನಾಡು ಮನವಿ ಸಲ್ಲಿಸಿತ್ತು.
ಕರ್ನಾಟಕದಲ್ಲಿ ನೀರಿನ ತೀವ್ರ ಸಂಕಷ್ಟದ ಪರಿಸ್ಥಿತಿಯ ನಡುವೆಯೂ ಸೆಪ್ಟೆಂಬರ್ 15 ರಂದು ನಡೆದಿದ್ದ ಕಾವೇರಿ ನೀರು ನಿಯಂತ್ರಣ ಸಭೆಯಲ್ಲಿ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ನಿತ್ಯ 5 ಸಾವಿರ ಕ್ಯುಸೆಕ್ ನೀರು ಬಿಡಲು ಸೂಚಿಸಲಾಗಿತ್ತು. ಹೀಗಾಗಿ ಸಮಿತಿಯ ಈ ಆದೇಶವನ್ನು ಪ್ರಾಧಿಕಾರದ ಮುಂದೆ ಪ್ರಶ್ನಿಸಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸಿತ್ತು. ಆದರೀಗ ಇಂದಿನ ಸಭೆಯಲ್ಲೂ ಕೂಡ ತಮಿಳುನಾಡಿಗೆ ನೀರು ಬಿಡಲು ಸೂಚನೆ ನೀಡಲಾಗಿದೆ. ಕಳೆದ CWRC ಆದೇಶವನ್ನ ಕರ್ನಾಟಕ ಸರಿಯಾಗಿ ಪಾಲಿಸುತ್ತಿಲ್ಲ ಎಂದು ಕೂಡ ತಮಿಳುನಾಡು ಸರ್ಕಾರ ಆರೋಪಿಸಿದೆ.
ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ ಕಾವೇರಿ ಕಣಿವೆಯ ಪ್ರದೇಶದಲ್ಲಿ ಬರ ತಲೆದೂರಿದ್ದು, ಕುಡಿಯುವ ನೀರಿಗೂ ಕೊರತೆ ಸಾಧ್ಯತೆ ಸೇರಿದಂತೆ ಪ್ರಸ್ತುತ ಸ್ಥಿತಿಗತಿ, ನೀರಿನ ಪ್ರಮಾಣ ಎಲ್ಲವನ್ನೂ ಮುಂದಿಟ್ಟು ಕಾವೇರಿ ನೀರು ಬಿಡದಿರಲು ಕರ್ನಾಟಕ ಅಧಿಕಾರಿಗಳು ಸಿದ್ಧತೆ ನಡೆಸಿದ್ದರು. ಆದರೀಗ ತಮಿಳುನಾಡಿಗೆ ಮತ್ತೆ 5 ಸಾವಿರ ಕ್ಯೂಸೆಕ್ ನೀರು ಬಿಡಲು ಕರ್ನಾಟಕ ಸರ್ಕಾರಕ್ಕೆ CWMA ಆದೇಶ ನೀಡಿದ್ದು, ಮತ್ತೆ ರೈತರಿಗೆ ಆತಂಕ ಶುರುವಾಗಿದೆ.