ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿದ ಪ್ರಕರಣದಲ್ಲಿ ಹಿಂದುತ್ವ ಕಾರ್ಯಕರ್ತೆ ಚೈತ್ರಾ ಕುಂದಾಪುರ ಮತ್ತಾಕೆಯ ಸಹಚರರು ಅಂದರ್ ಆಗಿದ್ದಾರೆ.
ಮಾಧ್ಯಮಗಳಲ್ಲಿ ಚೈತ್ರಾ ಕುಂದಾಪುರ ಎಂದೇ ಉಲ್ಲೇಖಿಸಲಾಗುತ್ತಿದ್ದು, ಇದಕ್ಕೆ ಕುಂದಾಪುರ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚೈತ್ರಾ ಮಾಡಿರುವ ವಂಚನೆಯ ಕಾರಣಕ್ಕೆ ಆಕೆಯ ಹೆಸರಿನೊಂದಿಗೆ ಕುಂದಾಪುರವನ್ನು ಉಲ್ಲೇಖಿಸುತ್ತಿರುವ ಕಾರಣ ನಮ್ಮ ಊರಿಗೆ ಕಳಂಕ ಬರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ವಂಚಕಿ ಚೈತ್ರಾಳ ಹೆಸರಿನ ಮುಂದೆ ಕುಂದಾಪುರದ ಹೆಸರನ್ನು ಬಳಸದಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದು, ಆಕೆ ಮಾಡಿದ ತಪ್ಪು ಸಾಬೀತಾದರೆ ಚೈತ್ರಾ ಶಿಕ್ಷೆ ಅನುಭವಿಸುತ್ತಾಳೆ. ಆದರೆ ಆಕೆಯ ಹೆಸರಿನ ಮುಂದೆ ನಮ್ಮ ಊರಿನ ಹೆಸರನ್ನು ಬಳಸಬೇಡಿ ಎಂದು ಹೇಳಿದ್ದಾರೆ.