
ಕೆಲ ದಿನಗಳ ಹಿಂದೆ ಕಲಾವಿದ ಡಾ. ಮಳವಳ್ಳಿ ಮಹದೇವಸ್ವಾಮಿಯವರು ಹಾಡಿರುವ ಅರ್ಜುನ ಜೋಗಿ ಜಾನಪದ ಗೀತೆ ‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ…..’ ಹಾಡಿಗೆ ವಿದ್ಯಾರ್ಥಿನಿಯರು ಸ್ಟೆಪ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು. ಬಳಿಕ ಇದೇ ಹಾಡಿಗೆ ಹಲವರು ತಮ್ಮದೇ ಆದ ರೀತಿಯಲ್ಲಿ ನೃತ್ಯ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದೀಗ ಇದೇ ಮಹಾದೇವಸ್ವಾಮಿಯವರ ‘ಅಂದ ಸಿರಿಗಂಧದ್ವನವೇ ಪರಿಮಳದ ಕೆಂದಾವರಿ ಕುಲದ ವನವೇ…..’ ಎಂಬ ಮತ್ತೊಂದು ಚರಣ ವೈರಲ್ ಆಗಿದ್ದು, ಕಾರ್ಕಳದ ಶಾಲಾ ಶಿಕ್ಷಕಿ ವಂದನಾ ರೈ ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ನೃತ್ಯ ಸಂಯೋಜನೆ ಮಾಡಿ ಅದ್ಭುತವಾಗಿ ನರ್ತಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಕುರಿತಂತೆ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿರುವ ಡಾ. ವಡ್ಡಗೆರೆ ನಾಗರಾಜಯ್ಯ, ‘ಕಲಾವಿದ ಡಾ. ಮಳವಳ್ಳಿ ಮಹದೇವಸ್ವಾಮಿ ಹಾಡಿರುವ ಅರ್ಜುನ ಜೋಗಿ ಜಾನಪದ ಹಾಡಿನ “ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೆ ? ಪಡೆದಂತಾ ತಾಯಿ ಇಂಥಾ ಸುಂದರನ ಮರೆತ್ಯಾಂಗೆ ಇರುವಳಮ್ಮಾ” ಎಂಬ ಸಾಲುಗಳಿಗೆ ಹೆಣ್ಣುಮಕ್ಕಳು ನೃತ್ಯ ಮಾಡಿರುವ ವಿಡಿಯೋ ವೈರಲ್ ಆದ ಸಂಗತಿ ನಿಮಗೆಲ್ಲರಿಗೂ ತಿಳಿದಿದೆ.
ಈಗ ಇದೇ ಮಹಾದೇವಸ್ವಾಮಿ ಅವರ “ಅಂದ ಸಿರಿಗಂಧದ್ವನವೇ ಪರಿಮೆಳದ ಕೆಂದಾವರಿ ಕುಲದ ವನವೇ..., ಕೆಂದಾವರಿ ಕುಲದಂಥಾ ಧೀರಾಲರ‌್ಜುನರಾಯ ಇಂದೊಂದು ರಾಗ ನಲಿಯೋ….” ಎಂಬ ಸಾಲುಗಳಿಗೆ ಕಾರ್ಕಳ ಪಟ್ಟಣದ ಶಾಲಾ ಶಿಕ್ಷಕಿ ವಂದನಾ ರೈ ತಮ್ಮ ವಿದ್ಯಾರ್ಥಿಗಳೊಂದಿಗೆ ಸೃಜನಶೀಲವಾಗಿ ನೃತ್ಯ ಸಂಯೋಜನೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯಬಿಟ್ಟಿದ್ದಾರೆ.
ಅರ್ಜುನ ಜೋಗಿ ಕುರಿತಾದ ದೀರ್ಘವಾದ ಜಾನಪದ ಕಥನಗೀತೆಯ ನಡುವೆ ಬರುವ ಸಾಲುಗಳನ್ನು ಹೆಕ್ಕಿ ತೆಗೆದುಕೊಂಡು ಡ್ಯಾನ್ಸ್ ಕೊರಿಯೋಗ್ರಫಿ ಮಾಡಿ ವಿಡಿಯೋ ಚಿತ್ರೀಕರಿಸುವ ಮೂಲಕ ಜಾನಪದ ಕಾವ್ಯವನ್ನು ಜನಮಾನಸಕ್ಕೆ ಮುಟ್ಟಿಸುತ್ತಿರುವ ಹೆಣ್ಣುಮಕ್ಕಳ ಪ್ರಯೋಗಶೀಲ ಜಾಣ್ಮೆ ನನಗೆ ಮೆಚ್ಚುಗೆಯಾಯಿತು. ಶಾಲಾ ಶಿಕ್ಷಕಿ ವಂದನಾ ರೈ ಅವರು ಡ್ಯಾನ್ಸ್ ಕೊರಿಯೋಗ್ರಫಿ ಮಾಡಿ ತಾನೂ ಆಕರ್ಷಕವಾಗಿ ನರ್ತಿಸಿ ತೋರಿಸಿರುವ ಈ ಪ್ರಯೋಗಶೀಲತೆಯು ಮಳವಳ್ಳಿಯ ಕೃಷ್ಣಾಪುರದ ಮಹದೇವಸ್ವಾಮಿಯವರಿಗೆ ಮತ್ತು ಮೌಖಿಕ ಧಾರೆಗೆ ಸಲ್ಲಿಸಿರುವ ಗೌರವವೂ ಆಗಿದೆ’ ಎಂದು ಹೇಳಿದ್ದಾರೆ.