ಬೆಂಗಳೂರು: ಆದಾಯ ಹೆಚ್ಚಳಕ್ಕೆ ಮುಂದಾಗಿರುವ ಕೆಎಸ್ಆರ್ಟಿಸಿ ಕಾರ್ಗೋ ಸೇವೆ ನೀಡಲು ಮುಂದಾಗಿದೆ. 20 ಟ್ರಕ್ ಗಳ ಖರೀದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮುಂದಾಗಿದ್ದು, ಮುಂದಿನ ಒಂದು ತಿಂಗಳಲ್ಲಿ ಕೆಎಸ್ಆರ್ಟಿಸಿ ಲಾರಿಗಳು ರಸ್ತೆಗೆ ಇಳಿಯಲಿವೆ.
ಪಾರ್ಸೆಲ್ ಸೇವೆಯನ್ನು ಉತ್ತಮಪಡಿಸಿ ಆದಾಯ ಹೆಚ್ಚಳಕ್ಕೆ ಮುಂದಾಗಿರುವ ಕೆಎಸ್ಆರ್ಟಿಸಿ ಸಣ್ಣ ಪ್ರಮಾಣದಲ್ಲಿದ್ದ ಪಾರ್ಸೆಲ್ ಸೇವೆಯನ್ನು ವೃದ್ಧಿಸಲು 20 ಟ್ರಕ್ ಗಳ ಖರೀದಿಗೆ ಮುಂದಾಗಿದೆ. ಬಸ್ ಗಳ ಲಗೇಜ್ ಬಾಕ್ಸ್ ಗಳಲ್ಲಿ ಸಣ್ಣ ಪ್ರಮಾಣದಲ್ಲಿ ಪಾರ್ಸೆಲ್ ಗಳನ್ನು ಸಾಗಿಸುತ್ತಿದ್ದು, ವಾರ್ಷಿಕ 4 ಕೋಟಿ ರೂ. ಆದಾಯ ಬರುತ್ತಿದೆ. ಇದನ್ನು ಹೆಚ್ಚಳ ಮಾಡಿ ಆದಾಯ ವೃತ್ತಿಗೆ ಕ್ರಮ ಕೈಗೊಳ್ಳಲಾಗಿದೆ.
ಬಸ್ ಗಳಲ್ಲಿ ಲಗೇಜ್ ಸಾಗಿಸಲು ಸ್ಥಳಾವಕಾಶ ಕಡಿಮೆ ಇರುವುದರಿಂದ 6 ಟನ್ ಸಾಮರ್ಥ್ಯದ 20 ಟ್ರಕ್ ಗಳನ್ನು ಖರೀದಿಸಲಾಗುತ್ತಿದೆ. ಇದಕ್ಕೆ ಅನುಮೋದನೆ ದೊರೆತಿದ್ದು, ಹೆಚ್ಚಿನ ಪಾರ್ಸೆಲ್ ಇರುವ ಮಾರ್ಗ ಗುರುತಿಸಿ ಸೇವೆ ನೀಡಲಾಗುವುದು. ಟ್ರಕ್ ಗಳು ಹೋಗದ ಮಾರ್ಗಗಳಲ್ಲಿ ಬಸ್ ಗಳಲ್ಲಿಯೇ ಪಾರ್ಸೆಲ್ ಸಾಗಿಸಲಾಗುವುದು. ಟ್ರಕ್ ಗಳ ಖರೀದಿಸಲು ನಿರ್ಧರಿಸಲಾಗಿದ್ದು, ಅಂತಿಮ ಆದೇಶ ನೀಡುವುದು ಬಾಕಿ ಇದೆ. 100 ಕೋಟಿ ರೂ. ಆದಾಯದ ಗುರಿ ಹೊಂದಲಾಗಿದೆ ಎಂದು ಹೇಳಲಾಗಿದೆ.