ಮಹಾರಾಷ್ಟ್ರದ ಥಾಣೆಯಲ್ಲಿ ಭಾನುವಾರ ಕಟ್ಟಡದ 40ನೇ ಮಹಡಿಯಿಂದ ಲಿಫ್ಟ್ ಕುಸಿದು 7 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಪ್ರಕಾರ, ಈ ಘಟನೆಯು ಘೋಡ್ ಬಂದರ್ ಬಳಿಯ ಬಾಲ್ಕುಂಬ್ ಪ್ರದೇಶದ ರುನ್ವಾಲ್ ಐರಿನ್ ಕಟ್ಟಡದಲ್ಲಿ ಸಂಭವಿಸಿದೆ.
ಸರ್ವಿಸ್ ಲಿಫ್ಟ್ ಅಸಮರ್ಪಕವಾಗಿ ಕಾರ್ಯನಿರ್ವಹಿತ್ತಿದ್ದರಿಂದ ದುರಂತ ನಡೆದಿದೆ. ಮಹೇಂದ್ರ ಚೌಪಾಲ್, ರೂಪೇಶಕುಮಾರ್ ದಾಸ್, ಹರೂನ್ ಶೇಖ್, ಮಿಥಿಲೇಶ್, ಕಾಳಿದಾಸ್ ಸೇರಿ 7ಜನ ಸಾವನ್ನಪ್ಪಿದ್ದಾರೆ.
ಥಾಣೆ ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣೆಯ ರಕ್ಷಣಾ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಥಾಣೆ ಮುನ್ಸಿಪಲ್ ಕಾರ್ಪೊರೇಷನ್ನ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥರಾದ ಯಾಸಿನ್ ತದ್ವಿ ಅವರು ಮಾಹಿತಿ ನೀಡಿ, ನಿರ್ಮಾಣದ ಸರ್ವಿಸ್ ಲಿಫ್ಟ್ 40 ನೇ ಮಹಡಿಯಿಂದ ಕೆಳಗೆ ಕುಸಿದಿದೆ ಎಂದು ತಿಳಿಸಿದ್ದಾರೆ.
ಮೇಲಿನ ಮಹಡಿಗಳು ಮತ್ತು ಎತ್ತರದ ಟೆರೇಸ್ನಲ್ಲಿ ಜಲನಿರೋಧಕ ಕೆಲಸಕ್ಕಾಗಿ ಕೆಲಸ ಮಾಡುವ ಕಾರ್ಮಿಕರು ಸರ್ವಿಸ್ ಲಿಫ್ಟ್ ನಲ್ಲಿ ಇಳಿಯುತ್ತಿದ್ದರು. ಅವರ ಇಳಿಯುವಿಕೆಯ ಮಧ್ಯದಲ್ಲಿ ಹಠಾತ್ ತಾಂತ್ರಿಕ ದೋಷ ಸಂಭವಿಸಿತು, ಇದರಿಂದಾಗಿ ಲಿಫ್ಟ್ನ ಹಗ್ಗವು ತುಂಡಾಗಿ ಏಕಾಏಕಿ ಲಿಫ್ಟ್ ಕುಸಿದು 7 ಕಾರ್ಮಿಕರ ಜೀವ ಬಲಿತೆಗೆದುಕೊಂಡಿದೆ.