ಬೆಂಗಳೂರು: ರಾಜ್ಯದಲ್ಲಿ ದಿನಸಿ ಪದಾರ್ಥಗಳ ಬೆಲೆ ಗನಗನಕ್ಕೇರಿದೆ. ಅಕ್ಕಿ, ಹೆಸರು, ಉದ್ದು ಸೇರಿದಂತೆ ಆಹಾರ ಧಾನ್ಯಗಳ ಬೆಲೆ ಹೆಚ್ಚಳವಾಗಿದ್ದು, ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.
ಮಳೆ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡನೇ ಸಲ ಬಿತ್ತಿದ ಬೆಳೆ ಕೂಡ ಹಾಳಾಗತೊಡಗಿದೆ. ಈ ಬಾರಿ ಉತ್ಪಾದನೆ ಪ್ರಮಾಣ ಶೇಕಡ 40ರಷ್ಟು ಕುಸಿತ ಕಾಣುವ ಆತಂಕ ಇದೆ. ಪರಿಸ್ಥಿತಿಯ ಲಾಭ ಪಡೆದು ಕೆಲವೆಡೆ ಕೃತಕ ಆಭಾವ ಸೃಷ್ಟಿಸಿರುವ ಶಂಕೆ ವ್ಯಕ್ತವಾಗಿದೆ.
ಈ ಕಾರಣದಿಂದ ಆಹಾರ ಧಾನ್ಯಗಳ ಬೆಲೆ ಭಾರಿ ಏರಿಕೆಯಾಗಿದೆ. ತೊಗರಿ ಬೇಳೆ ದರ ಕೆಜಿಗೆ 140 ರಿಂದ 180 ರೂ., ಹೆಸರುಬೇಳೆ 110 ರಿಂದ 120 ರೂ., ಉದ್ದಿನ ಬೇಳೆ 115 ರಿಂದ 130 ರೂ., ಕಡಲೆ 125 ರಿಂದ 132 ರೂ., ವಿವಿಧ ಅಕ್ಕಿದರ ಈಗ ಇರುವ ದರಕ್ಕಿಂತ 10 ರಿಂದ 20 ರೂ. ವರೆಗೆ ಹೆಚ್ಚಳವಾಗಿದೆ. ಬಹುತೇಕ ಎಲ್ಲಾ ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.