ಜೈಸಲ್ಮೇರ್ನಲ್ಲಿ ಶನಿವಾರದಂದು 43.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಕಳೆದ 74 ವರ್ಷಗಳಲ್ಲಿ ದಾಖಲಾದ ಸೆಪ್ಟೆಂಬರ್ ತಿಂಗಳ ಅತ್ಯಂತ ಗರಿಷ್ಠ ತಾಪಮಾನವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಸಾರ್ವಕಾಲಿಕ ಗರಿಷ್ಠ ತಾಪಮಾನವು ಈ ಋತುಮಾನದಲ್ಲಿ ಇರುವ ಸಾಮಾನ್ಯ ತಾಪಮಾನಕ್ಕಿಂದ 6.9 ಡಿಗ್ರಿ ಸೆಲ್ಸಿಯಸ್ ಹೆಚ್ಚಿದೆ ಎಂದು ತಿಳಿದು ಬಂದಿದೆ.
1949ರ ಸೆಪ್ಟೆಂಬರ್ 10ರಂದು ಜೈಸಲ್ಮೇರ್ನಲ್ಲಿ ಸಾರ್ವಕಾಲಿಕ ಗರಿಷ್ಠ ತಾಪಮಾನ 43.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಎಂದು ಹವಾಮನ ಇಲಾಖೆ ತಿಳಿಸಿದೆ. ಮರುಭೂಮಿಯ ಹಲವಾರು ಪ್ರದೇಶಗಳು ಶನಿವಾರದಂದು ತೀವ್ರ ಶಾಖದಿಂದ ತತ್ತರಿಸಿವೆ ಎನ್ನಲಾಗಿದೆ.
ಇನ್ನು ಜೈಸಲ್ಮೇರ್ ಹೊರತುಪಡಿಸಿದ್ರೆ ಬಾರ್ಮರ್ 40.3 ಡಿಗ್ರಿ ಸೆಲ್ಸಿಯಸ್ ದಾಖಲಿಸಿದ ರಾಜ್ಯದ ಎರಡನೇ ಅತ್ಯಂತ ಶಾಖಯುತ ಸ್ಥಳ ಎನಿಸಿದೆ. ಇದಾದ ಬಳಿಕ ಬಿಕಾನೇರ್ನಲ್ಲಿ 40 ಡಿಗ್ರಿ ಸೆಲ್ಸಿಯಸ್, ಜೋಧ್ಪುರದಲ್ಲಿ 39.5 ಡಿಗ್ರಿ, ಜಾಲೋರ್ನಲ್ಲಿ 38.7 ಡಿಗ್ರಿ ಹಾಗೂ ಗಂಗಾನಗರದಲ್ಲಿ 38.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.