ಕಾರವಾರ: ಬೃಹತ್ ಗಾತ್ರದ ನೀಲಿ ತಿಮಿಂಗಿಲದ ಮೃತದೇಹ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗಳಿ ಕಡಲಧಾಮದಲ್ಲಿ ಪತ್ತೆಯಾಗಿದೆ.
ಇದು ಅಪರೂಪದ ತಿಮಿಂಗಿಲವಾಗಿದ್ದು, ಸುಮಾರು 35 ಮೀ ಉದ್ದವಿದ್ದು ಮೃತದೇಹ ಪತ್ತೆಯಾಗಿರುವ ಬಗ್ಗೆ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಬಲೀನ್ ತಳಿಗೆ ಸೇರಿದ ತಿಮಿಂಗಿಲ ಇದಾಗಿದ್ದು, ಮೃತಪಟ್ಟು ಹಲವು ದಿನಗಳು ಕಳೆದಿರುವ ಸಾಧ್ಯತೆ ಇದೆ. ಅಲೆಗಳ ರಭಸಕ್ಕೆ ಈಗ ದಡಕ್ಕೆ ಬಂದು ಬಿದ್ದಿದೆ. ತಿಮಿಂಗಿಲದ ಸಾವಿಗೆ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆ ಬಳಿಕ ಗೊತ್ತಾಗಲಿದೆ ಎಂದು ಕಾರವಾರದ ಕಡಲ ಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಶಿವಕುಮಾರ್ ತಿಳಿಸಿದ್ದಾರೆ.
ಈ ತಿಮಿಂಗಿಲಗಳು ಸಮುದ್ರದ ತಣ್ಣನೆಯ ಪ್ರದೇಶದಿಂದ ಉಷ್ಣಪ್ರದೇಶಕ್ಕೆ ಸಂತಾನೋತ್ಪತ್ತಿ ವೇಳೆ ಬರುತ್ತವೆ. ನೇತ್ರಾಣಿ ದ್ವೀಪ, ಮುಗಳಿ ಕಡಲಧಾಮ ಬಳಿ ವಲಸೆ ಬರುವುದು ಹೆಚ್ಚು. ಶಾರ್ಕ್ ಮೀನುಗಳ ದಾಳಿಯಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂಬುದು ಸಂಶೋಧಕರ ಅಭಿಪ್ರಾಯ.