ಧಾರವಾಡ : ರಾಜ್ಯ ಸರ್ಕಾರವು ಸಿರಿಧಾನ್ಯ ಬೆಳೆಯುವ ರೈತರಿಗೆ ಸಿಹಿಸುದ್ದಿ ನೀಡಿದ್ದು, ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂ. ಸಹಾಯಧನ ನೀಡಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಈ ವರ್ಷ ಸಿರಿಧಾನ್ಯ ಅಂತರಾಷ್ಟ್ರೀಯ ವರ್ಷವಾಗಿರುವುದರಿಂದ ರಾಜ್ಯ ಸರಕಾರದಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ ಗೆ ರೂ.10 ಸಾವಿರ ಸಹಾಯಧನವನ್ನು ನೀಡಲಾಗುತ್ತಿದೆ ಎಂದರು. ಕಬ್ಬು ಹಾಗೂ ಇತರ ಬೆಳೆಗಳ ಕಟಾವು ತಾಂತ್ರಿಕತೆ ಸುಧಾರಣೆಗಾಗಿ ಐಟಿ ಹಬ್ ಸ್ಥಾಪನೆಗೆ ರಾಜ್ಯ ಸರಕಾರ ರೂ.50 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.
ಅನೇಕ ವೀರರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ಸಿಕ್ಕಿದೆ. ರೈತರು ಅನೇಕ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದು, ಅವುಗಳ ಪರಿಹಾರಕ್ಕಾಗಿ ರಾಜ್ಯ ಸರಕಾರ ಅನೇಕ ಯೋಜನೆ ಜಾರಿಗೊಳಿಸಿದೆ. ದೇಶಕ್ಕೆ ಮಾದರಿಯಾಗುವ ಕಾರ್ಯಕ್ರಮಗಳನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೊಳಿಸಿದ್ದಾರೆ ಎಂದು ಅವರು ಹೇಳಿದರು.
ಕೃಷಿಭಾಗ್ಯ ಯೋಜನೆ ಮುಂದುವರಿಕೆ ಸರಕಾರ ಆದೇಶಿಸಿದೆ. ಧಾರವಾಡ ಕೃಷಿ ವಿವಿಯು, ರಾಷ್ಟ್ರದ 10 ಉತ್ತಮ ಕೃಷಿ ವಿಶ್ವವಿದ್ಯಾಲಯದಗಳಲ್ಲಿ ಸ್ಥಾನಪಡೆದಿದೆ. ಸಂಶೋಧನೆ, ಕೃಷಿ ತಾಂತ್ರಿಕತೆ, ಉತ್ತಮ ಬೀಜ ತಳಿಗಳ ಬಿಡುಗಡೆ ಮಾಡುವ ಮೂಲಕ ರೈತರ ಕಣ್ಮನಿಯಾಗಿದೆ ಎಂದರು. ರಾಜ್ಯ ಸರಕಾರ ರೈತರ ಬೆಳೆವಿಮೆಗಾಗಿ ರೂ.900 ಕೋಟಿ ಮೀಸಲಿಡಲಾಗಿದೆ. ಇದರಿಂದ ಬೆಳೆವಿಮೆ ಮಾಡಿಸಿರುವ ಸುಮಾರು 16 ಲಕ್ಷ ರೈತರು ಲಾಭ ಪಡೆಯಲಿದ್ದಾರೆ ಎಂದು ಕೃಷಿ ಸಚಿವರು ತಿಳಿಸಿದರು.