ಮಂಡ್ಯ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಜೆಡಿಎಸ್ ಜೊತೆ ಮೈತ್ರಿ, ಹೊಂದಾಣಿಕೆ ಆಗಿಲ್ಲವೆಂದು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ನಾಯಕರು ದೂರವಾಣಿ ಕರೆ ಮಾಡಿ ಈ ಬಗ್ಗೆ ತಿಳಿಸಿದ್ದಾರೆ. ಯಾವುದೇ ಪಕ್ಷದ ಜೊತೆ ಮೈತ್ರಿ ಆಗಬೇಕಾದರೆ ಕೇಂದ್ರ ಸಮಿತಿ ಸರ್ವೆ ಮಾಡಿಸುತ್ತದೆ. ಸರ್ವೆ ಆಧಾರದಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕೇಂದ್ರದ ನಾಯಕರು ನಿರ್ಧರಿಸುತ್ತಾರೆ ಎಂದು ಮೈತ್ರಿ ವಿಚಾರವಾಗಿ ಅಶೋಕ್ ಉಲ್ಟಾ ಹೊಡೆದಿದ್ದಾರೆ.
ಕಾಂಗ್ರೆಸ್ ನವರು ಮಾಡುತ್ತಿರುವ ಅನ್ಯಾಯ ಜನರ ಮುಂದಿಡಲು ಇಲ್ಲಿಗೆ ಬಂದಿದ್ದೇವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸಿದೆ. ರೈತರಿಗೆ ಮೋಸ ಮಾಡಿದ್ದಾರೆ. ಕುಡಿಯುವ ನೀರಿಗೂ ಹಾಹಾಕಾರ ಬರುತ್ತದೆ. ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ವಾಸ್ತವ ಸ್ಥಿತಿ ಅರಿಯಲು ಭೇಟಿ ನೀಡಿದ್ದೇವೆ. ನಿಜ ಬಣ್ಣ ಬಯಲಾಗುತ್ತದೆ ಎಂಬ ಭಯದಿಂದ ಮಾಧ್ಯಮದವರನ್ನು ಬಿಟ್ಟಿಲ್ಲ. ಇಂದಿರಾ ಗಾಂಧಿ ತಂದಿದ್ದ ತುರ್ತು ಪರಿಸ್ಥಿತಿಯನ್ನು ಮಾಧ್ಯಮಕ್ಕೆ ತಂದಿದ್ದಾರೆ. ಇದರ ಅಜೆಂಡಾ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮಾಡುತ್ತಿದೆ ಎಂದು ಅಶೋಕ್ ಹೇಳಿದ್ದಾರೆ.