ಬೆಂಗಳೂರು : ರಾಜ್ಯ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದ್ದು, ಮತ್ತೊಂದು ಅಕ್ರಮ ಆರೋಪದ ತನಿಖೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.
ಹೌದು, ಬಿಜೆಪಿ ಸರ್ಕಾರದ ಅವಧಿಯಲ್ಲಿನ ಮತ್ತೊಂದು ಅಕ್ರಮ ಆರೋಪದ ಬಗ್ಗೆ ತನಿಖೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ವಿದ್ಯಾ ವಿಕಾಸ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಕೇಂದ್ರೀಯ ಭಂಡಾರದಿಂದ ಕಳಪೆ ಸಮವಸ್ತ್ರ ಪೂರೈಕೆ ಮಾಡುವ ನಿಟ್ಟಿನಲ್ಲಿ ಕೋಟ್ಯಾಂತರ ರೂ ಅಕ್ರಮ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಇಲಾಖಾ ತನಿಖೆ ನಡೆಸಲು ನಿನ್ನೆ ನಡೆದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ ನಿರ್ಧರಿಸಿದೆ.
ಕಳಪೆ ಗುಣಮಟ್ಟದ ಬಟ್ಟೆ ಪೂರೈಕೆದಾರನಿಗೆ ಶೇ.100 ರಷ್ಟು ಮೊತ್ತ ಪಾವತಿ ಮಾಡಲಾಗಿದೆ ಎಂದು ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದ್ದಾರೆ. ನಿಗಮ ಪೂರೈಸಿದ ಬಟ್ಟೆಯು ಕಳಪೆ ಗುಣಮಟ್ಟದಿಂದೆ ಕೂಡಿದೆ ಎಂದು 2023ರ ಫೆ. 21ರಂದು ಕೇಂದ್ರ ರೇಷ್ಮೆ ಮಂಡಳಿ ವರದಿ ನೀಡಿತ್ತು. ಕಳಪೆ ಗುಣಮಟ್ಟಎಂದು ವರದಿ ನೀಡಿದರೂ ಈ ಪೈಕಿ 117 ಕೋಟಿ ರು. ಪಾವತಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.